ಕಾಡು Poem by Praveen Kumar in Bhavana

ಕಾಡು

ಹೊಲಸು ಕಾಡಿನ ದಾರಿ ತುಂಬ ತುಂಬಿದೆ ಮಬ್ಬು,
ಕೊಳೆತ ಕೊಬ್ಬು ಛಿದ್ರ ಮಾಂಸದ ಗಬ್ಬು;
ದಾರಿ ಮರೆಯಲಿ ಹರಿವ ವಿಷ ಹಾವು ಹಲವು,
ಗಿಡಗಂಟಿಗಳ ದಟ್ಟ ಮುಳ್ಳುಬೇಲಿಯ ತೊಡಕು.

ಗುಡ್ಡಕಣಿವೆ, ಮೇಲಿಳಿತಗಳ ವಿಷಮ ಸರದಿ,
ಮಳೆಗಾಳಿ ಚಳಿಗಳ ಮಿಳಿತ ಮ್ಲಾನ ಹವಮಾನ;
ಕಾಲಿಟ್ಟಲ್ಲಿ ಗಂಜಳದ ಹೊಂಡ, ಹೆಗಲಿಗೇರುವ ಕೆಸರು,
ಜಾರಿದರೆ ಸೆರೆಹಿಡಿದ ಪಾತಾಳ ಮೃತ್ಯುಕೂಪ.

ಬೇತಾಳ ಮರಗಳ ಮಧ್ಯೆ ಕುಗ್ಗಿ ಬೆದರುತ ನಿಂತು
ಮೇಲೇರುವ ಹುಮ್ಮಸು ಹಾರಿದೆ ಎಲ್ಲೋ;
ಹೆಣೆದು ಹರಡಿದ ದಟ್ಟ ಮರಗೆಲ್ಲು ಪಂಜರದಲ್ಲಿ
ಬಂಧಿಯಾಗಿದೆ ಜೀವ, ಭೂತ, ಭವಿಷ್ಯತ್ತು.

ಎಲ್ಲಿ ನೋಡಿದರಲ್ಲಿ ಸುತ್ತು ಬಳ್ಳಿಗಳು
ಸಂಕೋಲೆಯಾಗಿ ಪೀಡಿಸುವುವು ಸುತ್ತಿ ಸುತ್ತಿ;
ಎಲ್ಲಿ ನೋಡಿದರಲ್ಲಿ ಹಸಿದ ಜಿಗಣೆಗಳು
ಮೈಕೈ ಕಚ್ಚಿ ಹೀರುವುವು ರಕ್ತ.

ನಡೆಯಬೇಕು, ನಡೆಯುತ್ತಿರಬೇಕು ದಾರಿಯುದ್ದ,
ಕಾಲೂರಿ ಮೈಮರೆತರೆ ಹುಲಿತೋಳಗಳ ಭಾಧೆ ಶತಸಿದ್ಧ;
ಬೆನ್ನ ಹಿಂದೆ ನೋವುಗಳ ಗತ ಇತಿಹಾಸದ ಕಂತೆ,
ಕಣ್ಣ ಮುಂದೆ ಕತ್ತಲಲ್ಲಡಗಿದ ಹಾದಿಯ ಸಂತೆ.

ಕಾಡಿನೊಳಗಡೆ ಬಿದ್ದು, ಗೆದ್ದು ಹೊರಬಿದ್ದವರಿಲ್ಲ,
ವಿಧಿ ನಿಯಮಗಳೆಂದು ಹೋರಾಡಿ ಗೆದ್ದವರಿಲ್ಲ;
ಕಾನನದ ಕಾನೂನು ಕಣ್ಣಿಗೆ ಕಾಣುವುದಲ್ಲ,
ಮುಚ್ಚಿ ಕಣ್ಣು ನಡೆಯಬೇಕು ಮುಂದೆ ಮುಂದೆ.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success