ಅರುಣೋದಯವಾಗಬೇಕು Poem by Praveen Kumar in Bhavana

ಅರುಣೋದಯವಾಗಬೇಕು

ಕಣ್ಣುಕಟ್ಟಿರುವ, ಕತ್ತಲೆಯ ಮಬ್ಬನ್ನು ಹರಿದು,
ದೂರ ದಿಗಂತದ ಮರೆಯಿಂದ, ಬೆಳಕು ಹರಿದು,
ಹೊಸ ಚೇತನದ, ಹೊಸ ಆಕಾಂಕ್ಷೆಗಳ, ಅರುಣೋದಯವಾಗಬೇಕು;
ಶಿಥಿಲಗೊಂಡಿರುವ, ಧೈರ್ಯೋತ್ಸಾಹಗಳ ಪುನರುಜ್ಜೀವನಕ್ಕಾಗಿ,
ಮೈಮನಸುತ್ತಿರುವ, ಭೂತ, ಪ್ರೇತ, ಚೇಷ್ಟೆಗಳ, ಪಲಾಯನಕ್ಕಾಗಿ,
ಜೀವದೆಡೆದೆಡೆಯಲ್ಲಿ, ಹೊಸಶಕ್ತಿಯ, ಅರುಣೋದಯವಾಗಬೇಕು.

ಮರಗಟ್ಟಿರುವ ಮೈಮನಕ್ಕೆ, ಹಿತೋಷ್ಣವನ್ನು ತರುವ,
ಕಂಗೆಟ್ಟ ಹೃದಯಕ್ಕೆ, ಯಾವುದೇನೆಂದು ತಿಳಿಸಿ ಹೇಳುವ,
ನೋವನ್ನು ಮರೆಸಿ, ಹೊಸತನ ತರುವ, ಅರುಣೋದಯವಾಗಬೇಕು;
ಬಯಲುದಾರಿಯ ವ್ಯಾಪ್ತಿಯಲ್ಲಿ, ಕವಲುದಾರಿಯ ಕಾಣದೆ,
ಶೂನ್ಯತೆಯ ಗರ್ಭದಲ್ಲಿ, ಬಿದ್ದು, ಕುಗ್ಗಿ, ಕೊರಗಿ, ನಶಿಸುತ್ತಿರುವ,
ದು: ಖಿ ಆತ್ಮವರಳಲು, ಪರಿಮಳ ಚೆಲ್ಲಲು, ಅರುಣೋದಯವಾಗಬೇಕು.

ಭಾರ ಹೊತ್ತು, ಹೊತ್ತು, ನಡೆದೂ, ಗುರಿಯ ಮುಟ್ಟದಿರಲು,
ಕಾಲು ಸೋತು, ಬೆನ್ನು ನೋವುಂಡು, ನಡೆ ಮುಗ್ಗರಿಸಲು,
ತಂಗಾಳಿಯ ಹಿತದ, ವಿರಾಮದ, ಸುಖದ, ಅರುಣೋದಯವಾಗಬೇಕು;
ಹೆಪ್ಪುಕಟ್ಟಿರುವ ಹತಾಶೆಯ, ಬಿಗಿಯ ಸಡಿಲಿಸಲು,
ಮತ್ತೆ ಜೀವಕ್ಕೆ, ಹೊಸ ಆಶೆ, ದಾಹಗಳ, ಸೇಂಚನೆಯ ಕೊಡಲು,
ಈಗಲಾದರೂ, ಅಭೀಷ್ಠ ಸಿದ್ಧಿಯ ತಂಪಿನ, ಅರುಣೋದಯವಾಗಬೇಕು.

ನೋವು, ಸೋಲಿನೊಂದೊಂದು ಚಿಪ್ಪುಗಳೊಡೆದು, ಬದಿಗೆ ಸರಿದು,
ಹೊಸಲೋಕ, ಹೊಸಹರ್ಷವದರಿಂದ ಹೊರ ಸುರಿದು,
ನಾಕ, ನರಕಗಳೆರಡಕ್ಕೂ ಕಿಚ್ಚು ಹಚ್ಚುವ, ಬೆಳಕಿನ ಅರುಣೋದಯವಾಗಬೇಕು;
ಕಳವಳದಿಂದ ದಿಕ್ಕೆಟ್ಟ ಹೃದಯಕ್ಕೆ ಸಾಂತ್ವಾನ ಕೊಡುವ,
ತೃಪ್ತಿ, ಶಾಂತಿ, ಸುಖ, ಸಮಾಧಾನಗಳ ಮೃತ ಸೇಂಚನೆಗರೆವ,
ಮುದುಡಿದ ಜೀವವರಳಿಸುವ, ಕಾಂತಸಮ್ಮಿತ ಅರುಣೋದಯವಾಗಬೇಕು.

ಹೆಪ್ಪುಗಟ್ಟಿದ, ಶೀತಲ ದು: ಖದ ಸಾಂದ್ರತೆ ಕರಗಬೇಕು,
ಭಾವಗಳ ಸ್ಠಂಭೀಕರಿಸಿದ, ದಟ್ಟ ಕತ್ತಲೆ ಸೊರಗಬೇಕು,
ತಿಳಿ ಬೆಳಕಿನ, ಚೇತೋ ಹಾರಿ ಸೆಲೆಯ, ಅರುಣೋದಯವಾಗಬೇಕು;
ಕಾಲದ ಸುಳಿಯಲ್ಲಿ ಬಿದ್ದು, ತರಗೆಲೆಯಂತೆ ಸುತ್ತುವ ಜೀವವ,
ಮೇಲೆತ್ತಿ, ಮತ್ತೆ ಉಸಿರಾಟಕ್ಕನುವು ಕೊಡುವ,
ಮಹತ್ವದ ವಿರಾಮದೈಸಿರಿಯ, ವಿಶೇಷ ಅರುಣೋದಯವಾಗಬೇಕು.
ನಿನ್ನ ಲಗಾಮಿನಂಕೆಯಲಿ ಜಿಗಿಯಲಿ ಗಗನಕ್ಕೆ ನಮ್ಮ ಕುದುರೆ


ನಿನ್ನ ಸಾರ್ವಭೌಮತ್ವಕ್ಕೆ, ತಲೆವಾಗಿ,
ನಿನ್ನ ಲೋಕದಲಿ, ಬೇರು ಬಿಟ್ಟಿರುವ ನಮಗೆ,
ನಿನ್ನ ನೀತಿ ನಿಯಮಗಳ ಪರಜ್ಞಾನ ನೀಡು;
ಎಲ್ಲಿ, ಏನು, ಹೇಗೆಂದು,
ಯಾಕೆ, ಇದು, ಹೀಗೆಂದು,
ನಮಗೆ, ನಿನ್ನನ್ನು ಬಿಟ್ಟು, ಹೇಳುವವರು ಯಾರು?
ಏರು ತಗ್ಗುಗಳಲ್ಲಿ ಏರಿಳಿಸಿ, ನಡೆಸುವವರು ಯಾರು?

ಇಲ್ಲಿ, ನಿನ್ನೀ ಲೋಕದಲ್ಲಿ, ಪ್ರತಿಯೊಂದು ವಿಚಿತ್ರ,
ಕಣ್ಣಿಗೆ ಕಾಣುವುದು ಕಲಿತ ಕಾರಣಗಳು ಮಾತ್ರ;
ಒಳಗೊಳಗೆ ನಡೆಯುವ, ರೀತಿ, ನೀತಿಗಳೆ ಬೇರೆ;
ಮುಂದೆ ಹೋದವರು, ಹಿಂದೆ,
ನಿಂತೆ ಬಿಟ್ಟವರು, ಬಲು ಮುಂದೆ,
ಯಾಕೆ ಏಕೆಂದು, ಕೆಳಗೆ ದುಮುಕಿದವರು, ಮೇಲೇರಿ ಹೋದುದಿದೆ,
ಮುಂದೆ ಮುಂದೆಯೆಂದು, ಅಳೆದು ಹೆಜ್ಜೆ ಇಟ್ಟವರು, ನಿಂತಲ್ಲೆ ನಿಂತುದಿದೆ.

ಭೂತಭವಿಷ್ಯತೆಂದು, ವರ್ತಮಾನ ಮರೆಯುವವರು ನಾವು,
ಹಿಂದೆ ಮುಂದೆಯೆಂದು, ಕಾಲೂರಿದ ತಾಣ ಮರೆಯುವವರು ನಾವು;
ನಮಗೆ, ನಮ್ಮದೆ, ಭಿನ್ನ ರೀತಿ, ನೀತಿ, ನಿಯಮ ತಾಗಾದೆ;
ಅದರಿಂದಲೆ, ಎಲ್ಲ ಆಭಾಸ,
ಅನ್ಯಾಯ, ನಿರಾಶೆ, ನೋವು, ಮೋಸ;
ನಿನ್ನನ್ನು, ನಿನ್ನ ದಾರಿ, ನಿರೀಕ್ಷೆಗಳನರಿತರೆ ಮಾತ್ರ, ಮೋಕ್ಷ ನಮಗೆ,
ನಮ್ಮ ಪ್ರವೃತ್ತಿಗಳ ಮೀರಿನಿಂತರೆ ಮಾತ್ರ, ರಕ್ಷೆ ನಮಗೆ.

ಕೆಟ್ಟದೊಳ್ಳೆಯದು, ನಮ್ಮ ಪರಿಮಿತ ಚಿಂತನೆಯ ಭ್ರಾಂತುಗಳು,
ಮೇಲೆಕೆಳಗೆನ್ನುವುದು, ನಮ್ಮ ವಿಶ್ರಾಮದ ಹುಡುಗಾಟಗಳು;
ಸರಿತಪ್ಪು, ನಾವು ನಮಗಾಗಿ ವಿಧಿಸಿದ ಬಾಲಿಶ ರೇಖೆಗಳು;
ನಮ್ಮ ನಿರ್ಮಿತಿಯ ಬಲೆಯಲ್ಲೆ ನಾವು,
ಸಿಕ್ಕಿ ಅನುಭವಿಸುವೆವೆಲ್ಲ ನೋವು;
ನೀನು ಮುಂದೆ ನಡೆಸದ ವಿನಹ, ಈ ಗತಿ ತಪ್ಪಿದಲ್ಲ,
ಮುಟ್ಟಿದ್ದೆಲ್ಲ ಮುಗಿ ಬೀಳುವ ಈ ಭೀತಿ ನಿಲ್ಲುವುದಿಲ್ಲ.

ನಿನ್ನ ತೋಟದ ಬೇಲಿಯ ಮಿತಿಯಲ್ಲೆ, ನಮ್ಮ ಹೂವು ಅರುಳುವಂತೆ ಹರಸು,
ನಿನ್ನ, ನಮ್ಮ, ರೀತಿ ನಿಯಮಗಳು ಮೇಲಾಡದಂತೆ ನಡೆಸು;
ನಿನ್ನ ಲಗಾಮಿನಮಕೆಯಲಿ ಜಿಗಿಯಲಿ, ಗಗನಕ್ಕೆ ನಮ್ಮ ಕುದುರೆ;
ಆಗಲೆ, ಎಲ್ಲ ತೃಪ್ತಿ, ಸಮರಸತೆ,
ಶಾಂತಿ, ಸಮಾಧಾನ, ಸುಖದ ಒರತೆ;
ಈ ಲೋಕಕ್ಕೆ ನಾವು, ನಮಗಾಗಿ ಲೋಕವೆಂಬ ಪರಸ್ಪರತೆ, ಸಹಾಯ,
ಬಾಹ್ಯಾಂತರಿಕ್ಷದೊಳಗೆ ಸಖ್ಯ, ಸಾಮರಸ್ಯ, ಪೂರಕತೆ, ನ್ಯಾಯ.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success