ನಾವು ನೀವಿರುವ ಲೋಕ Poem by Praveen Kumar in Bhavana

ನಾವು ನೀವಿರುವ ಲೋಕ

ಸಾಗರದ ನೀರನ್ನು ಎಳೆ ಬೊಗಸೆಗಳಿಂದ ಎತ್ತೆತ್ತಿ ಕುಡಿದು
ಸಾಗರದ ಮೂಲ ಕಂಡೆನೆನುವಷ್ಟೆ ನನ್ನ ಲೋಕದನುಭವದಾಳ,
ನಾನು ಮುಗಿಯದ ಲೋಕಜ್ಞಾನದ ಮಧ್ಯೆ ಹರಿದಾಡುವ ಕ್ಷುದ್ರ ಹುಳ,
ತಿಂದದಷ್ಟನ್ನೆ ಹೊರಹಾಕುವ ಎರೆಹುಳ, ಸೀಮಿತ ಪರಿಜ್ಞಾನವೆನ್ನದು.

ಕಂಡು, ಕೇಳಿಯನುಭವಿಸಿದ, ಚಿಕ್ಕ ಎಳೆಗಳಿಂದ ಹೆಣೆದ,
ಅಸ್ತವ್ಯಸ್ತ ಬಲೆಗಳ ಹಿಂಡು, ನಮ್ಮ ತಿಳುವಳಿಕೆ;
ನಮ್ಮನುಭವದ ಎಳೆಗಳ ಮೇಲೆ, ಸುಳಿದಾಡುವ ನಮಗೆ,
ಬಲೆಗೆ ಬಿದ್ದುದೆ ನಮ್ಮನುಭವದ ಒಳಗೆ, ಮತ್ತೆಲ್ಲವೂ ಹೊರಗೆ.

ಇದು ನನ್ನ ದಾರಿಯ ಬೆಳಕು, ನನ್ನ ನಡೆಸುವ ಶಕ್ತಿ,
ಯಾವುದೇನೆಂದು ಹೇಳಿ ನನ್ನನೆಚ್ಚರಿಸುವ ದ್ಠೃಷ್ಠಿ,
ಇದು ನನಗಂತೂ ಸತ್ಯ, ಸೌಂಧರ್ಯ, ನನ್ನೊಳಗಿನ ಸತ್ವ,
ಇಲ್ಲಿ ಹಾಡುವುದೆಲ್ಲ ಸ್ವಂತದನುಭವದ ಸೃಷ್ಠಿ.

ನಾವು ನೀವಿರುವ ಲೋಕ, ಒಂದು ಆಕಸ್ಮಿಕದ ಆಟ,
ಈ ಆಕಸ್ಮಿಕದಲ್ಲೂ ನಡೆಯುವುದು ರೀತಿರಿವಾಜುಗಳ ಪಾಠ;
ದಿನ ನಿತ್ಯ ನಡೆಯುವುದೆ, ವಿಕಸನದ ಹೊಸ ಹೊಸ ಪ್ರಯೋಗ,
ಇದರಿಂದ ಹೊರ ಬರುವುದು, ಜೀವನದ ಹೊಚ್ಚ ಹೊಸ ಮಾರ್ಗ.

ಕಣ್ಣು ಕಿವಿಗಳ ತೆರೆದಿಟ್ಟವರಿಗೆ, ಕಾಣುವುದು ಹಲವಾರು ಮಾರ್ಗ;
ಹಲವು ದಿಕ್ಕುಗಳ ತುಂಬ, ಹಲವಾರು ಅನುಕೂಲ ವೈವಿಧ್ಯ;
ಎಲ್ಲ ಕಂಡು, ಕೇಳಿ, ತಿಳಿಯುವುದೆ ದೊಡ್ಡ ಸಂಪತ್ತು,
ಬುದ್ದಿ ಹಿಡಿತದ ಹೊರಗಾ ಸಂಪತ್ತು ನುಸುಳುವುದೆ, ವಿಪತ್ತು.

ಎಲ್ಲ ತಿಳಿಯಬೇಕು, ತಿಳಿಯದಂತಿರಬೇಕು,
ಸಾಧನಗಳ ಎದುರಿಟ್ಟು, ಕರ್ಮಯೋಗಿಯಾಗಿರಬೇಕು;
ಚಿಂತನೆಯ ಹಸುರುದೀಪದ ಸಂಜ್ಞೆ ಎಚ್ಚರಿಸಿದಾಗ ಮಾತ್ರ,
ಸಾವಧಾನದಿ ಮೇಲೆದ್ದು, ಕ್ರಿಯಾಶೀಲನಾಗಬೇಕು.

ಸೋಗಿನಾಟದ ಸೋಗು, ಜೀವನದ ಬಳಿ ಬರದಿದ್ದರೆನೆ ಚಂದ,
ಒಳಗಿದ್ದವರೆ ಹೊರಗಿದ್ದರೆ, ಅದೇ ಯೋಗಗಳ ಯೋಗ;
ಒಳಗೆ, ಹೊರಗಿನ ಮಧ್ಯೆ, ಸೇತುವೆಯ ಕಟ್ಟಿ, ಬೆಳೆದು,
ನಾವು, ನಾವಾಗಿರುವುದೆ ಶಾಂತಿ, ಸಮಾಧಾನ, ಧೈರ್ಯ.

ಸಿಡಿಲುಗಳು ಬಡೆದಾಗ, ಒಡೆಯದ ಉಕ್ಕು ಒಳಗಿರಬೇಕು,
ಬಿಸಿಲಿಗೂ ಕರಗದ, ಹಿಮದ ಗಟ್ಟಿತನ ಬೆಳೆದಿರಬೇಕು;
ಶುದ್ಧ ಹೃದಯದಿ, ಸುತ್ತುಮುತ್ತನು ನೋಡುವ ಅಂತ: ಕರಣ,
ಸಿದ್ಧಾಂತಗಳ ಬಲೆಯ ಹೊರಗೆ, ಪರಿಪಕ್ವಗೊಳ್ಳಬೇಕು.

ಹಿತವರಹಿತರೆನ್ನುವುದು, ಮನದೊಳಗಿನ ಕೃತಕ ಸೃಷ್ಠಿ,
ಹಿತಹಿತಗಳೆಲ್ಲ, ನಮ್ಮೊಳಗಿನ ಗುಣವಗುಣಗಳ ಬಿಂಬ;
ನಮ್ಮೊಳಗನ್ನು ಪ್ರತಿಫಲಿಸುವ ಕನ್ನಡಿ, ಹೊರ ಲೋಕ,
ಒಳಗೆ ಹಿಡಿತದಲ್ಲಿದ್ದರೆ, ಹೊರಗೆ ಕಾಣಿಸುವುದೆಲ್ಲ ನಾಕ.

ನಾವಿರುವ ಲೋಕ, ಹಲವು ದ್ರವ್ಯಗಳ ಪಾಕ,
ಹಲವು ನಾದ, ಬಣ್ಣಗಳ ಏರಿಳಿತಗಳ ತಾಳಮೇಳ;
ರುಚಿಯರಿತು, ವಿವಿಧ ರೂಪ ತಾಳಿದರೆನೆ ಚೆನ್ನ,
ಬಿರುಸು, ನಿಷ್ಠುರತೆುಂದ, ಬಿರುಕು, ವಿನಾಶಕ್ಕೆ ದಾರಿ.

ಮಾತು ಹಿತಮಿತವಾಗಿ, ಹೂವುದಳದಂತೆ ಮುತ್ತಿಡಬೇಕು,
ಅರುಣೋದಯದ ಎಳೆಬಿಸಿಲಿನಂತೆ, ಮೈಮನ ಸ್ಪರ್ಶಿಸಬೇಕು;
ಹೇಳಬೇಕಾದುದನಷ್ಟೆ, ತಗ್ಗಿ ಬಗ್ಗಿ ಹೇಳಿದರೆನೆ ಚಂದ,
ಸ್ಪಷ್ಟವಾದುದನಷ್ಟೆ, ಸ್ಪಷ್ಟ, ನೇರ, ಹೇಳುವುದೆ ಆನಂದ.

ಹೊರ ನಿಸರ್ಗದ ಪ್ರತಿಯೊಂದು, ನಮ್ಮ ಹೃದಯ ಮುಟ್ಟಬೇಕು,
ಲೋಕ ಕೊಟ್ಟದರಲ್ಲೆಲ್ಲ, ಪ್ರೀತಿ ಸೌಂದರ್ಯ ಕಾಣಬೇಕು;
ಒದಗಿದರಲ್ಲೆ, ನಾಜೂಕು, ಕುಸುರು, ಬುದ್ದಿ ಮೆತ್ತೆ, ಕೂಡಿಟ್ಟು,
ವಿನಯ, ವಿನಮ್ರತೆಯಿಂದ, ಮತ್ತೆ ನಿಸರ್ಗಕ್ಕೆ ಶರಣಾಗಬೇಕು.

ಲೋಕ ಹೇಗಿರಲಿ, ನಾವು ಮಾಡುವುದರಲ್ಲೆಲ್ಲ ಸೊಗಸಿರಬೇಕು;
ಸುತ್ತಲಿನ ಅಸ್ತವ್ಯಸ್ತದಲಿ, ವ್ಯವಸ್ಥೆಯ ಧ್ರುವವಾಗಿ ನಿಂತು,
ನಮ್ಮ ದಾಳಗಳನಾಡಿಸುವುದೆ ನಿಜ ಸುಖ, ಶಾಂತಿ, ತೃಪ್ತಿ;
ನಮ್ಮತನದಲಿ ಬೇರೂರಿ ಬೆಳೆಯುವುದೆ, ನಿಜವಾದ ಶಕ್ತಿ.

ಹಿತವಾದುದನ್ನೆಲ್ಲ, ಅಂತ: ಕರಣದಲಿ ಕೂಡಿಡಬೇಕು,
ಅಹಿತವಾದುದನ್ನೆಲ್ಲ, ಮಲಿನತೆಯೆಂದು ದೂರವಿಡಬೇಕು;
ಕೋಪದ್ವೇಶಗಳಿಂದ, ಜನ, ಮನ, ಲೋಕ, ಬದಲಿಸಿದವರಿಲ್ಲ,
ಒಳಗೊಳಗೆ ಜೀವ ಸವೆಯದ ಹಾಗೆ, ಗಟ್ಟಿಕೋಟೆ ಕಟ್ಟಬೇಕು.

ದಾರಿಯಿದ್ದಾಗ ಮುಂದೆ, ಅವಶ್ಯವಾದಾಗ ಹಿಂದೆ,
ಹಿಂದೆ, ಮುಂದೆ, ನಡೆಯುವುದೆ ಪಕ್ವತೆಯ ದಾರಿ;
ಎಡ, ಬಲ, ನೋಡಿ, ನಿಂತು, ಮುಂದೇನೆಂದು ಅರಿತು,
ಮತ್ತೆ ಹಜ್ಜೆ ಇಡುವುದೆ, ಜಾಣ ಬದುಕಿನ ಗುರುತು.

ಒಳಗಿನ ಏರಿಳಿತ, ತಿರುವುಗಳ ಒಳಗೊಳಗೆ ಬಚ್ಚಿಟ್ಟು,
ನಡೆವ ದಾರಿಯ ಮಾತ್ರ ಹೊರಗೆ ತೋರಬೇಕು;
ಭಾವದೊತ್ತಡಗಳನೆಂದೆಂದೂ, ಒಳಗೊಳಗೆ ಅದುಮಿಟ್ಟು,
ಬುದ್ದಿ ಪ್ರಜ್ಞೆಯ ಕೈಯಿಂದ, ನಮ್ಮ ಮುನ್ನಡೆಸಬೇಕು.

ಉಕ್ಕಿನ ಕಂಬವಾಗಿರಬೇಕು, ಹೂವಿನ ರಾಶಿಯಾಗಿರಬೇಕು,
ಬಳಿ ಬಂದವರಿಗೆಲ್ಲ, ಹಿತ, ಬೆಂಬಲದ ಕಾಶಿಯಾಗಿರಬೇಕು;
ಸೌಂದರ್ಯ, ಗುಣವಗುಣಗಳ ಕಾಣುವ, ದಿವ್ಯ ಕಣ್ಣಿರಬೇಕು,
ಅನ್ಯಾಯದೆದುರು ನಡೆವ, ಹೃದಯವಚಿತಿಕೆ ಬೇಕು.

ದಾರಿ ಮೇಲಿರಲಿ, ಕೆಳಗಿರಲಿ, ಸಮನಾಗಿ ನಡೆದು,
ಹಿಡಿದ ದಿಕ್ಕನು ಬಿಡದ, ಹಿಡಿತವಿದ್ದರೆನೆ ಚಂದ,
ದಾರಿ ಕಲ್ಲಿರಲಿ, ಮುಳ್ಳಿರಲಿ, ಸಂಯಮದಿ ನಡೆದು,
ಒಳಗೊಳಗೆ ಬೆಳೆದರದೆನೆ, ಸತ್ವ ಜೀವನ ಸಂಬಂಧ.

ಜೀವನ ವ್ಯೂಹದ ಮಧ್ಯೆ, ಬುದ್ದಿ ಸಂಯಮ ತೋರಿ,
ದಾರಿ ಹುಡುಕಿದರೆ, ನಮಗೆ ವಿಜಯ ಸದಾ ಸಿದ್ದ;
ಪ್ರತಿಯೊಬ್ಬರಿಲ್ಲಿ ವಿಶಿಷ್ಠ, ಪ್ರತಿದಾರಿ ವಿಶಿಷ್ಠ,
ನಮ್ಮನಮ್ಮನ್ನರಿತು ನಡೆಯುವುದೆ, ಜೀವನದ ರಾಜ ಮಾರ್ಗ.

Friday, April 29, 2016
Topic(s) of this poem: philosophy
COMMENTS OF THE POEM
READ THIS POEM IN OTHER LANGUAGES
Close
Error Success