ಒಳಗು-ಹೊರಗು Poem by Praveen Kumar in Bhavana

ಒಳಗು-ಹೊರಗು

ಸುಯೋಧನನ ಹೊಟ್ಟೆ ಬಗೆದವನೊಬ್ಬನಿದ್ದ
ಭೀಮಸೇನ,
ರಕ್ತದಲಿ ಕೈಯದ್ದಿ ಕರುಳು ಹೊರಗೆಳೆದಿದ್ದ,
ದ್ರೌಪದಿ ಮುಡಿಯಲಂಕರಿಸಿದ್ದ,
ಗರ್ವ ಗೌರವ ಯುದ್ಧದುದ್ದ
ದ್ವೇಷ ನೆಣ ರಕ್ತ ಹೊರಚೆಲ್ಲಿದ್ದ,
ವೈರವೀರದಂತರ ಮರೆತು
ಹೊಲಸು ಗೊಬ್ಬರದ ಗಬ್ಬು ಗಬ್ಬರಿಸಿದ್ದ,
ಬಟ್ಟೆ ಕಳಚಿ, ಬರಿಗಾಳಿಗೆ ಮೈಯೊಡ್ಡಿ
ಅಸಭ್ಯ ನಗ್ನ ನೃತ್ಯ ಮಾಡಿದ್ದ.

ಒಳಗಿರುವುದು ಒಳಗಿದ್ದರೆ ಚಂದ, ಹೊರಗಿರುವುದು ಹೊರಗೆ,
ಇದು ನಿಸರ್ಗನಾಟಕದ ಮೂಲಾಧಾರ ನಿಯಮ,
ಒಳಗು-ಹೊರಗುಗಳ ಭಿತ್ತಿ ಸೌಂದರ್ಯದ ಮೂಲ,
ಈ ಅಸ್ಥಿತ್ವದ ಮೂಲ, ಜೀವ ವಿಕಾಸದ ಮೂಲ;
ಗೋಡೆಗಳು ಬಿರಿದು, ಕಟ್ಟುಗಳು ಒಡೆದು
ಲೋಕಗಳೆರಡು ಮಹಪೂರಗೊಂಡಾಗ
ನಾವು ನಾವಲ್ಲ, ನೀವು ನೀವಲ್ಲ,
ಮತ್ತೆ, ಸತ್ಯ ಅಸತ್ಯ, ಹಗಲು ರಾತ್ರಿ ಭೇದ ಭಾವಗಳಿಲ್ಲ;
ಅದು ನಿಸರ್ಗನಾಟಕದ ನಿದ್ಧ ಮಹಾಯುದ್ಧ,
ಭೂತ ಪ್ರೇತಗಳಾದಿ ಕೂಡುವ ರಣ ನೃತ್ಯರಂಗ.

ಕಿಡಿಯಾಗಿ ಹೊರಡುವ ಬೆಂಕಿ ಜ್ವಾಲಮುಖಿಯಾಗುವುದು,
ಹಸಿರುಟ್ಟು ನಿಂತ ಕಾಡುವನಗಳ ಸುಟ್ಟುತಿಂದು
ಬೂದಿಯಡಿಯಲಿ ಕೆಂಡ
ಎಲ್ಲೆಂದರಲ್ಲಿ ಸಮಯ ಕಾಯುವುದು,
ಸುಟ್ಟವಾಸನೆ ಗಬ್ಬು ಕೊಟ್ಟು ನೆಗೆವ ಮ್ಲಾನಹೊಗೆ
ಉಸಿರು ಕಟ್ಟುವುದು ಜೊತೆಗೆ ಮನಸು ಕೆಡಿಸುವುದು;
ನಾಲೆತೋಡಿ ಸಾಗರ ಹರಿಸುವ ದುಸ್ಸಾಹಸ ತೋರಿ
ಪ್ರವಾಹದಡಿ ಕೊಚ್ಚಿ ವಿಚ್ಛಿನ್ನಗೊಳಬೇಡ
ಬೆಂಕಿಗಳ ಬಿಗಿದಿಟ್ಟು, ನವರಂಧ್ರಗಳ ಮುಚ್ಚಿಟ್ಟು
ಸಂಯಮದ ತಂಗಾಳಿಯಲ್ಲಿ ಮೈಮನ ತುಂಬದಿರಬೇಡ.

ಒಳಗಿನೊತ್ತಡದಿಂದ ಹೊರಗೆ ಜಾರುವುದು ಜಗನಿಯಮ,
ಮತ್ತೆ ನುಗ್ಗಿ ಹಿಗ್ಗಿ ಕುಗ್ಗಿ ರೂಪಾಂತರಗೊಂಡು
ಭಸ್ಮಾಸುರನಾಗಿ ಮೈಯೇರಿ ಬರುವುದು ನಿಯಮ;
ದಿಕ್ಕೆಲ್ಲ ಕಣ್ಣಿಟ್ಟ ದ್ವಾರಪಾಲಕನಾಗಿ
ನುಸುಳುವ ಪಾಚಿದೇಹಿಗಳ ಹಿಡಿದಿಡಬೇಕು,
ಹಿಡಿಮುಡಿ ಕಟ್ಟಿ, ಹಿಂದಕ್ಕೆ ದೂಡಿ
ಕೋಟೆ ಬಾಗಿಲು ಮುಚ್ಚಿ, ಅಗಳಿ ಭದ್ರ ಝಡಿದು
ಮನೆಯಂಗಳದ, ನೈರ್ಮಲ್ಯ ಕಾಪಾಡಬೇಕು;
ಗರ್ಭಗುಡಿ ಕತ್ತಲಲಿ ಜ್ಞಾನದೀಪದ ಜ್ಯೋತಿಯಲಿ
ಕಂಡರೆನೆ ನಮ್ಮ ಮನೆದೇವರು ಚೆಲುವು.

ನೀರಿನಿಂದೆತ್ತಿದ ಮೀನು, ನೀರು ಹಾವುಗಳಂತೆ
ಜೀವಕ್ಕಾಗಿ ಚಡಪಡಿಸುವ ಚಿತ್ರ,
ಪದರು ಪದರುಗಳ ಬಿಚ್ಚಿ, ರೋಮಕೂಪ ಕೂಪಗಳ ಚುಚ್ಚಿ
ತನ್ನತನ ಬಿಚ್ಚಿಡುವ ನಿರಭಿಮಾನದ ಚಿತ್ರ,
ನಿರೀಶ್ವರರ ಸೆರೆಯಾದ ಆಸ್ತಿಕನ ಚಿತ್ರ,
ಬಂಧನಗಳ ಬಿಚ್ಚಿ ಹಿತಹಿತ ಸಂಬಂಧ ಕಡಿದು
ಮೈಬಿಚ್ಚಿ ಹೊರಬಿದ್ದವರೆಲ್ಲ
ಅಲ್ಲೂ ಇಲ್ಲೂ ಸಲ್ಲದ ಆಗಂತುಕರು,
ಮನೆಗೂ ಹೊರಗು, ಹೊರ ಜಗತ್ತಿಗೂ ಹೊರಗು,
ಇದು ತೆರೆದ ಮನೆಬಾಗಿಲಿನ ದುಷ್ಟ ದೃಷ್ಟಾಂತ.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success