ಅಸಮಾನತೆ Poem by Praveen Kumar in Bhavana

ಅಸಮಾನತೆ

ನಿಸರ್ಗದ ಮಡಿಲಲ್ಲಿ ಮೊಳೆತ ಬಳ್ಳಿಗಳು ನಾವು,
ಎಲ್ಲಿ ಯಾಕೆ ಹುಟ್ಟುವುದೆಂದು ಯಾರೂ ಹೇಳಲಿಲ್ಲ;
ನಿಸರ್ಗದ ಸಿರಿಯಲ್ಲೆ ಬೆಳೆದ ಮಕ್ಕಳು ನಾವು,
ತಾಯಿಯ ಕೃಪೆಯಲ್ಲೆ ಬಡವಬಲ್ಲಿದ ಬೇಧವೇಕೆ?

ಹರಿವ ನೀರು, ಬೀಸು ಗಾಳಿ ತಾರತಮ್ಯ ತೋರಿಸಲಿಲ್ಲ,
ಕಾಲುಕೆಳಗಿನ ಭೂಮಿ, ಮಣ್ಣು ನಮ್ಮ ದೂರ ದೂಡಲಿಲ್ಲ;
ಮಣ್ಣಿಂದ ನಿಂತ ಗಿಡಮರಫಲಹೂವು ಸಮಾನತೆಯಿಂದ
ಪೊರೆವ ಕಾಲ ನಾವು ಎಲ್ಲವಿದ್ದೂ ಇಲ್ಲದವರಾಗಬೇಕೆ?

ಕಾಡಿನ ಗಿಡಮರಪೊದೆ ಎಲ್ಲ ಒಂದೆ ಎತ್ತರದಲ್ಲಿಲ್ಲ,
ಭೂಮಿಯ ನೆಲದಲ್ಲಿ ತಗ್ಗುದಿನ್ನೆ ಪ್ರಕೃತಿ ಪ್ರಕ್ರಿಯೆ;
ನಿಸರ್ಗ ವೈವಿಧ್ಯತೆಯ ಉದಾರತೆ ತೋರುವಾಗ,
ನಮ್ಮಲ್ಲೇಕೆ ಮಂದಿ ಅರೆಹೊಟ್ಟೆಗೆ ತೊಡಕಾಡಬೇಕು?

ಕೊರತೆ ಸಮಸ್ಯೆಯಲ್ಲ; ಇದು ದುರಾಶೆಯ ದುರಾವಸ್ಥೆ,
ಸಿಕ್ಕಿದೆಲ್ಲ ಬಾಚಿ, ಕೃತಕ ಕೊರತೆಸೃಷ್ಟಿಯ ಲೋಭತನ,
ನಿಸರ್ಗದ ಸಮಾನತೆಗೆ ಕೊಡುವ ಎಡಕಾಲಿನ ಒದೆತ;
ಅದೆಷ್ಟುಕಾಲ ಸಹಿಸುವುದೋ ನಿಸರ್ಗ ಈ ಅನಿಷ್ಟ ಕರ್ಮ?

ನಿಸರ್ಗಸೃಷ್ಟಿಯ ಎತ್ತರದ ಎವರೆಸ್ಟ್ ಶಿಖರವೆ ಮನುಷ್ಯಕುಲ,
ಸರಿತಪ್ಪು ನಿರ್ಧಾರಕೆ ಬಂದೆ ಮುಂದೆ ಮುಂದೆ ನಡೆವುದೆ ಕ್ಷೇಮ;
ಸ್ವಾತಂತ್ರ್ಯ ಯಮಳಧಾರೆ ಕತ್ತಿ; ತಪ್ಪಿದರೆ ಕುತ್ತು ಕಟ್ಟಿಟ್ಟ ಬುತ್ತಿ,
ಪಾತಾಳ ಪ್ರಪಾತದತ್ತ ಇಂದು ಇದು ನಾವು ಮುನ್ನುಗ್ಗುವುದೇನೋ?

ಮನುಷ್ಯನ ಹದಿಹರೆಯದ ಸ್ವಚ್ಚಂದ ಕಾಲ ಇದೇನೋ,
ಕಾಲ ಮೀರಿಲ್ಲ; ಪ್ರೌಢತೆಗೆ ಯುಗಾಂತರ ನಡೆಯಲುಂಟು,
ಅಸ್ವಸ್ಥ ಅಸಮಾನತೆ ಕಳಚಿ ಮನುಷ್ಯ ಮುಂದೆ ನಡೆಯಬೇಕು,
ನಿಸರ್ಗದೆತ್ತರಕೆ ತನ್ನ ಸಮತೆ ಪ್ರಾಮಾಣಿಕತೆ ಬೆಳೆಸಬೇಕು.

ನಿಸರ್ಗದ ಮಡಿಲಲ್ಲಿ ಮೊಳೆತ ಬಳ್ಳಿಗಳು ನಾವು,
ನಮ್ಮಲ್ಲಿ ಯಾರೂ ಮೇಲುಕೀಳು ಎತ್ತರತಗ್ಗುಗಳಿಲ್ಲ;
ಉಳಿದವರ ಕೆಳದಬ್ಬಿ ಸುಲಿದು ಬೆಳೆಯುವುದು ಸಲ್ಲ,
ಇದನ್ನರಿತರೆ ಮಾತ್ರ ನಾವು ನಾವಾಗುವುದು ಸಾಧ್ಯ.

READ THIS POEM IN OTHER LANGUAGES
Close
Error Success