ಧೂಮ್ರಪಾನ ರಗಳೆ Poem by Deepak Malapur

ಧೂಮ್ರಪಾನ ರಗಳೆ

ಮೊನ್ನೆ ಆಫೀಸಿಗೆ ಹೋಗಲು ಆಟೊ ಹತ್ತಿದೆ. ಸ್ವಲ್ಪ ದೂರ ಕ್ರಮಿಸಿದ ನಂತರ ಸಿಗರೇಟಿನ ವಾಸನೆ ಬಂತು. ಡ್ರೈವರ್ ಸಾಹೇಬ್ರ ಕೈಲಿ ಸಿಗರೇಟು ಇದ್ದಿದ್ದು ನನಗೆ ಗೊತ್ತಿರಲಿಲ್ಲ. 'ನನಗೆ ಸಿಗರೇಟು ಆಗಿ ಬರೋದಿಲ್ಲ, ದಯವಿಟ್ಟು ಸೇದಬೇಡಿ' ಎಂದು ಮನಸು ಎಷ್ಟು ಹೇಳಿದರೂ ನಾಲಿಗೆ ತೆಪ್ಪಗೆ ಬಾಯಿಯೊಳಗೆ ಅಡಗಿಕೊಂಡು ಕುಳಿತಿತ್ತು. ನಾನು ಕರವಸ್ತ್ರದಿಂದ ಮೂಗು ಮುಚ್ಚಿಕೊಂಡೆ. ಡ್ರೈವರ್ ಸಾಹೇಬ್ರು ತಮ್ಮ ಮುಂದಿದ್ದ ಕನ್ನಡಿಯಲ್ಲಿ ನಾನು ಮೂಗು ಮುಚ್ಚಿಕೊಂಡಿದ್ದು ಕಂಡು, ಇನ್ನೊಂದು ದಮ್ಮು ಅವಸರವಾಗಿ ಎಳೆದು, ಸಿಗರೇಟು ಹೊರಗೆಸೆದರು. ನನಗಾಗ ಆದ ಸಮಾಧಾನ ಅಷ್ಟಿಷ್ಟಲ್ಲ. ಹಾಗೆಯೇ, ಆ ಆಟೊ ಡ್ರೈವರ್ ನನ್ನ ಸಮಸ್ಯೆ ತಿಳಿದುಕೊಂಡು, ಅದಕ್ಕೆ ಸ್ಪಂದಿಸಿದರಲ್ಲ ಎಂದು ಖುಷಿ ಆಯ್ತು. ಆದರೆ, ಸಿಗರೇಟು ಸೇದುವುದರಿಂದ ಬೇರೆಯವರಿಗೆ ತೊಂದರೆಯಾಗಬಹುದು ಎಂಬ ಅರಿವು ತಡವಾಗಿ ಮೂಡಿದ್ದು ಸ್ವಲ್ಪ ಬೇಸರವನ್ನುಂಟು ಮಾಡಿತು.
ಹೀಗೆ ನಿತ್ಯ ಸಿಗರೇಟಿನೊಂದಿಗೆ ನನ್ನಂಥವರು ನಡೆಸುವ ಮೌನ ಹೋರಾಟಗಳು ಅನೇಕ. ಈ ಧೂಮಪಾನ ಮಾಡುವವರು ಒಂಥರಾ ಆತಂಕವಾದಿಗಳಿದ್ದಂತೆ, ಧೂಮಪಾನ ಮಾಡದವರು ಇವರನ್ನು ಎಲ್ಲಾದರೂ ಕಂಡರೆ, ತತ್ ಕ್ಷಣ ಜಾಗ ಖಾಲಿ ಮಾಡಿಬಿಡುವುದಂತು ಖಂಡಿತ. ಈಗಾಗಲೇ ದಟ್ಟನೆಯ ಟ್ರಾಫಿಕ್, ಔದ್ಯೋಗಿಕರಣದಿಂದಾಗಿ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಯಶಸ್ವಿಯಾಗಿ ಹೆಚ್ಚಾಗುತ್ತಿವೆ. ಅದು ಸಾಲದೆಂಬಂತೆ, ಈ ಧೂಮಪಾನಿಗಳ ಮಾಲಿನ್ಯ ಬೇರೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆಯೋ, ಇಲ್ಲ ಯಾರ ಮುಲಾಜೂ ಇಲ್ಲದೇ ಮುಕ್ತವಾಗಿ ಸೇದಿ ಎಂದು ಹೇಳಲಾಗಿದೆಯೋ ತಿಳಿಯುತ್ತಿಲ್ಲ. ಫುಟ್ ಪಾತ್ ಗೆ ಹತ್ತಿಕೊಂಡಂತೆ ಇರುವ ಚಿಕ್ಕಪುಟ್ಟ ಚಹಾ ಅಂಗಡಿಗಳು, ಬೀಡಾ ಅಂಗಡಿಗಳಲ್ಲಿ ನಿಂತುಕೊಂಡು ಸಿಗರೇಟು ಸೇದುತ್ತಿದ್ದರೆ, ನೋಡ್ಬೇಕು ಅವರ ಗತ್ತು ಗಮ್ಮತ್ತು. 'ನನ್ನ ದುಡ್ಡಿನಿಂದ ಸಿಗರೇಟು ತಗೊಂಡಿದ್ದೀನಿ, ನನ್ನ ಬೆರಳುಗಳಲ್ಲಿ ಹಿಡಿದುಕೊಳ್ಳುತ್ತೀನಿ, ನನ್ನ ಬಾಯಿಯಿಂದ ದಮ್ಮು ಹೊಡೆಯುತ್ತೀನಿ, ಹೊಗೆ ಬಿಡುವುದೂ ನನ್ನ ಬಾಯಿಯೇ, ಹೀಗಿರುವಾಗ ನಿನ್ನದೇನಯ್ಯ ಮಧ್ಯೆ ಕಂತೆ ಪುರಾ' ಅನ್ನೋ ಥರಾ ಹಾದು ಹೋಗುವವರನ್ನೆಲ್ಲ ನೋಡುತ್ತಿರುತ್ತಾರೆ.
ಮೊನ್ನೆ ಹೀಗೇ ಸ್ನೇಹಿತರೊಂದಿಗೆ ಬೇಕರಿ ಅಂಗಡಿ ಬಳಿ ನಿಂತು ಚಹಾ ಕುಡಿಯುತ್ತಿದ್ದಾಗ, ಒಬ್ಬ ತಾತ ಬಂದು ಸ್ವೀಟ್ ಬನ್ ಖರೀದಿಸುತ್ತಿದ್ದರು. ಆ ಸಮಯಕ್ಕೆ ಸರಿಯಾಗಿ ಅವರ ಮುಖಕ್ಕೆ ಗುರಿಯಿಟ್ಟು ಬಿಟ್ಟವರಂತೆ ಒಬ್ಬ ಕಟ್ಟುಮಸ್ತಾದ ಯುವಕ ಸಿಗರೇಟಿನ ಹೊಗೆ ಉಫ್ ಎಂದು ಬಿಟ್ಟ ನೋಡಿ, ತಾತನ ಕೋಪ ನೆತ್ತಿಗೇರಿತು. ತಾತ ದೈಹಿಕವಾಗಿ ಸದೃಢನಾಗಿರದಿದ್ದರೂ ಬನ್ನು ತೆಗೆದುಕೊಂಡು ಹೋಗುವಾಗ ಆ ಯುವಕನನ್ನು ಕೆಂಗಣ್ಣಿನಿಂದ ಗುರಾಯಿಸುತ್ತ ಹೋದ. ಆ ಯುವಕನೂ ತಾತನನ್ನೇ ನೋಡುತ್ತಿದ್ದ. ತಾತ ತನ್ನನ್ನು ಯಾಕೆ ಹಾಗೆ ನೋಡುತ್ತಿದ್ದ ಎಂಬುದು ಪಾಪ ಅವನಿಗೆ ಗೊತ್ತಾಗಲೇ ಇಲ್ಲ. ಅದಕ್ಕೆ ಏನೋ 'ಬೆಂಗಳೂರಲ್ಲಿ ಹುಚ್ಚರು ಜಾಸ್ತಿಯಾಗ್ತಿದ್ದಾರೆ' ಎಂದು ತನ್ನಷ್ಟಕ್ಕೆ ತಾನೇ ಅಂದುಕೊಂಡು, ಜಾಗ ಖಾಲಿ ಮಾಡಿದ. ಹೋಗುವಾಗ ಕೊನೆಯದಾಗಿ ಒಂದು ದಮ್ಮು ಎಳೆದು, ಅಲ್ಲೇ ನಿಂತಿದ್ದ ನಮ್ಮ ಮುಖಕ್ಕಷ್ಟು ಹೊಗೆ ಸಿಂಪಡಿಸಿ, ಸಿಗರೇಟನ್ನು ನೆಲಕ್ಕೆಸೆದು ಹೊಸಕಿ ಹೋದ. 'ಏನ್ರಿ, ಒಳ್ಳೆಯ ಮನೆತನದವರಂತೆ ಕಾಣುತ್ತೀರಿ. ದೇವರು ಒಳ್ಳೆಯ ಆರೋಗ್ಯ ಕೊಟ್ಟಿದ್ದಾನೆ. ತಿಳುವಳಿಕೆಯುಳ್ಳವರು, ಸಿಗರೇಟು ಸೇದಬಾರದೆಂದು ಗೊತ್ತಾಗಲ್ವೆ? ಸೇದಿದರೂ, ಸುತ್ತಮುತ್ತಲಿನ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂಬುದು ತಿಳಿಯುವುದಿಲ್ವೆ? ' ಎಂದು ಕೇಳಬೇಕೆನ್ನಿಸಿತು, ಅವನ ಸೈಜು ನೋಡಿ 'ಬಡವನ ಸಿಟ್ಟು ದವಡೆಗೆ ಮೂಲ' ಅನ್ನೋ ಗಾದೆ ಮಾತು ಶಾಲೆಯಲ್ಲಿ ಹೊಡೆಯುವ ವಾರ್ನಿಂಗ್ ಬೆಲ್ ನಂತೆ ಢಣ್ ಎಂದು ತಲೆಗೆ ಹೊಡೆಯಿತು. ಸುಮ್ಮನೇ ಚಹಾ ಕುಡಿದು, ನಮ್ಮ ನಮ್ಮಲ್ಲಿಯೇ ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಮಾತನಾಡುತ್ತ ಆಫೀಸಿಗೆ ಹೋದೆವು.
ಕೆಲವು ವರ್ಷಗಳ ಕೆಳಗೆ 'ಫ್ರೆಂಡ್ಸ್' ಅನ್ನೋ ಕನ್ನಡ ಚಲನಚಿತ್ರದಲ್ಲಿ ಧೂಮಪಾನ ಮಾಡದ ಒಬ್ಬ ಸ್ನೇಹಿತ ಧೂಮಪಾನಿಗಳಾದ ತನ್ನ ಸ್ನೇಹಿತರನ್ನ ಕೇಳ್ತಾನೆ 'ಲೋ, ಸಿಗರೇಟ್ ಸೇದಿದ್ರೆ ಏನ್ರೋ ಬರುತ್ತೆ? ' ಅಂತಾ. ಅದಕ್ಕೆ ಅವರ ಉತ್ತರ 'ಸಿಗರೇಟ್ ಸೇದಿದ್ರೆ ಹೊಗೆ ಬರುತ್ತೆ'. ಎಷ್ಟೊಂದು ಸ್ವಾರಸ್ಯಕರವಾದ ಉತ್ತರ ಅದು. ಸಿಗರೇಟು ಸೇದುತ್ತ ಹೋದರೆ, ಬೇಗನೇ ಹೊಗೆ ಹಾಕಿಸಿಕೊಳ್ಳೋದು ಗ್ಯಾರಂಟಿ ಅಂತಾ ಅರ್ಥ ಮಾಡಿಕೊಳ್ಳಬಹುದಲ್ವೆ! ಹೀಗಿದ್ರೂ ಸೇದುತ್ತಾರೆ ಅಂದ್ರೆ, ಏನು ಹೇಳಬೇಕೋ ಗೊತ್ತಾಗದು. ಈಗ ತಾನೇ ಪಿ.ಯು.ಸಿ. ಮುಗಿಸಿ ಬಂದ ಹುಡುಗರು ಸಂದಿಗೊಂದಿಯಲ್ಲಿ ನಿಂತು ಸಿಗರೇಟು ಹೊಡೆಯುತ್ತಿದ್ದರೆ, ಅವರೇ ಎಲ್ಲಾ, ಹಾಳಾಗಿ ಹೋಗಲಿ ಉಳಿದದ್ದೆಲ್ಲಾ ಅನ್ನೋ ರೀತಿ ತಮ್ಮದೇ ಲೋಕದಲ್ಲಿ ಮುಳುಗಿ ಹೋಗಿರುತ್ತಾರೆ. ಯಾಕೆ ಸೇದುತ್ತೀರಿ ಎಂದು ಕೇಳಿದರೆ, 'ಪ್ರೆಸ್ಟೀಜ್ ಇಶ್ಯೂ' ಅನ್ತಾರೆ. ಸಿಗರೇಟು ಸೇದುವುದರಲ್ಲಿ ಯಾವ ಪುರುಷಾರ್ಥ ಅಡಗಿದೆ ಎಂದು ನನ್ನ ತಲೆ ಕೆರೆದು ಕೆರೆದು ಗಾಯವಾಯಿತೇ ಹೊರತು, ಈ ಪ್ರೆಸ್ಟೀಜ್ ಇಶ್ಯೂ ಒಗಟು ಬಿಡಿಸಲಾಗಲಿಲ್ಲ. ಅವರು ಸಿಗರೇಟು ಹಚ್ಚಿದರೇನೇ ಅವರನ್ನು ಗಂಡಸು ಎಂದು ಪರಿಗಣಿಸುತ್ತಾರಂತೆ. ಅಷ್ಟು ಸಿಗರೇಟು ಸೇದಿದೆ, ಇಷ್ಟು ಪ್ಯಾಕೆಟ್ ಖಾಲಿ ಮಾಡಿದೆ ಎಂದು ಎದೆತಟ್ಟಿ ಹೇಳಿಕೊಳ್ಳುವುದರಲ್ಲಿ ಗಂಡಸುತನವಿಲ್ಲ. ಗಂಡಸುತನವಿರುವುದು ಸಿಗರೇಟು ಸೇದುವುದಿಲ್ಲ ಎಂದು ಮನಸ್ಸು ನಿಗ್ರಹಿಸುವುದರಲ್ಲಿ. ಇದೊಂದು ಕಿವಿ ಮಾತಷ್ಟೆ. ಒಪ್ಪಿಕೊಳ್ಳಲೇಬೇಕೆಂದೇನಿಲ್ಲ. ಈ ಮಾತನ್ನು ನನ್ನ ಸ್ನೇಹಿತನೊಬ್ಬನಿಗೆ ಹೇಳಿದಾಗ ಅವನು ಮೊದಲು ಐದು ನಿಮಿಷ ನಿರಂತರವಾಗಿ ನಕ್ಕ. ಯಾಕೆ, ಅದರಲ್ಲಿ ನಗುವಂಥದ್ದೇನಿದೆ ಎಂದು ಕೇಳಿದಾಗ, 'ಅಲ್ಲಯ್ಯಾ, ಮನಸ್ಸು ನಿಗ್ರಹಿಸಿ ಸಿಗರೇಟಿನಿಂದ ದೂರ ಉಳಿಯುವುದೇನೋ ಸರಿ. ಈ ಸಿಗರೇಟಿನ ಹೊಗೆ ಉಸಿರಾಡದೇ ಇರಲು ಎಷ್ಟು ಮನಸ್ಸು ನಿಗ್ರಹಿಸಿದರೇನು ಬಂತು? ' ಎಂದು ಉತ್ತರಿಸಿದಾಗ, ಪೆಚ್ಚಾಗಿ ನಿಂತೆ.
ಇನ್ನು ಈ ಸಿಗರೇಟು ಸೇದುವವರೊಂದಿಗೆ ಮಾತನಾಡುವುದಕ್ಕೂ ಬಹಳ ಧೈರ್ಯ ಬೇಕು. ಯಾಕಂದ್ರೆ, ಅವರೆದುರು ನಿಂತುಕೊಂಡಾಗ ಅವರು ಮಾತನಾಡಲು ಶುರು ಮಾಡಿದರೆ ಸಾಕು, ಬೆಂಗಳೂರಿನ ಮೂಲೆಮೂಲೆಯಲ್ಲಿ ದುರ್ನಾತ ಸೂಸುತ್ತ ಎದೆ ಸೆಟೆಸಿ ಹಲ್ಲು ಕಿರಿಯುತ್ತ ಬಿದ್ದುಕೊಂಡಿರುವ ತಿಪ್ಪೆಯ ಬಳಿ ನಿಂತುಕೊಂಡಂತಿರುತ್ತದೆ. ದುರಂತವೆಂದರೆ, ಅವರ ಬಾಯಿಯಿಂದ ಹೊರಡುವ ಪ್ರತಿಯೊಂದು ಪದವೂ ಸಿಗರೇಟಿನ ದುರ್ವಾಸನೆಯಲ್ಲಿ ಮಿಂದೆದ್ದಿರುವುದು ಅವರಿಗೆ ತಿಳಿಯುವುದೇ ಇಲ್ಲ. ಅವರಿಗೆ ತಿಳಿಸಿ ಹೇಳಬೇಕನ್ನುವಷ್ಟರಲ್ಲಿ, ದುರ್ನಾತದ ಬಿರುಗಾಳಿಗೆ ಮನಸ್ಸಿನಲ್ಲಿ ಚಿಗುರೊಡೆದ ಬುದ್ಧಿಮಾತುಗಳೆಲ್ಲ ಬುಡಸಮೇತ ಹಾರಿ ಹೋಗುತ್ತವೆ...ಇನ್ನೂ ಅನೇಕ ವಿಚಾರಗಳು ಈ ವಿಷಯವಾಗಿ ಹಂಚಿಕೊಳ್ಳಬೇಕೆನ್ನಿಸಿದರೂ, ಪ್ಯಾಸಿವ್ ಸ್ಮೋಕರ್ಾ ಅಂದರೆ ಪರೋಕ್ಷ ಧೂಮಪಾನಿ ಅನ್ನೋ ಹಣೆಪಟ್ಟಿಯಿಂದ ತಪ್ಪಿಸಿಕೊಳ್ಳುವುದಂತೂ ಅಸಾಧ್ಯವೆಂದು ತಿಳಿದು, ಸಮೀಪದಲ್ಲೆಲ್ಲೂ ಪರಿಹಾರ ಕಾಣಿಸದಿದ್ದರೂ, ಕತ್ತಲುಮಯ ಸುರಂಗದ ಕೊನೆಯಲ್ಲಿ ದೀಪವಿದ್ದೇ ಇದೆ ಎಂಬ ಆಶೆಯೊಂದಿಗೆ ಪೂರ್ಣವಿರಾಮ ಇಡುತ್ತೇನೆ.

Tuesday, November 25, 2014
Topic(s) of this poem: art
COMMENTS OF THE POEM
READ THIS POEM IN OTHER LANGUAGES
Close
Error Success