ಗರ್ಭಗುಡಿ Poem by KUVEMPU KV PUTTAPPA

ಗರ್ಭಗುಡಿ

Rating: 3.5


ಬಳೆಯುತಿರೆ ದಿವ್ಯಾರ್ಭಕಂ ಗರ್ಭಗುಡಿಯಲ್ಲಿ
ನಿನ್ನ ಮೈ, ಗರ್ಭಿಣಿಯೆ, ದೇವಾಲಯಂ; ಪೂಜ್ಯೆ
ನೀನೆನಗೆ. ಓ ಲಕ್ಷ್ಮಿ, ಓ ಸೃಷ್ಟಿಸಾಮ್ರಾಜ್ಯೆ,
ನಿನ್ನ ಕರ್ಮದ ಮಹಿಮೆ ನಿನಗರಿಯದಿದೆ: ಬಳ್ಳಿ

ಹೂ ಹಡೆವುದಲ್ತೆ? ಸಾಮಾನ್ಯ ಪಾಮರ ದೃಷ್ಟಿ
ಕಾಣದದರಲಿ ಕೃತಿರಹಸ್ಯದ ಪವಾಡಮಂ;
ಬ್ರಹ್ಮಶಿಲ್ಪಿಯ ಪರಮ ಕಲೆಯ ಕೈವಾಡಮಂ
ಕಂಡು ರೋಮಾಂಚ ರಸವಶನು ಕವಿ! ತವ ಸೃಷ್ಟಿ

ಕವಿಕೃತಿಗೆ ಕೀಳಲ್ಲ. ಪೇಳ್ವವಂಗರಿಯದಿರೆ ಕೇಳ್ವ
ರಸಿಕಂಗರಿಯದಿಹುದೆ ವರಕೃತಿ ಮಹಿಮೆ?
ತನ್ನ ತಾನರಿಯದು ಮಹತ್ತು, ಕೈಮುಗಿಯದಿರೆ
ಜಗತ್ತು: ರಾಮಾನುಚರನಾಂಜನೇಯಂಗುಪಮೆ!

ಪೂರ್ಣಾಂಗಿ, ತೇಜಸ್ವಿ ಪೂರ್ಣಚಂದ್ರ ಶರೀರೆ,
ಶಿವಕೃತಿ ಕಲಾರಂಗಮೆನಗೆ ನೀನ್, ಓ ನೀರೆ!

POET'S NOTES ABOUT THE POEM
ದಿವ್ಯಶಿಶುವನ್ನು ತನ್ನುದರದಲ್ಲಿ ಧರಿಸಿ ನಿಂತಿರುವ ಗರ್ಭಿಣಿ ದೇವಾಲಯದಂತೆಯೇ ಕವಿಗೆ ಕಂಡು ಪೂಜನೀಯಳಾಗಿದ್ದಾಳೆ. ಆಕೆ ಲಕ್ಷ್ಮಿ. ಸೃಷ್ಟಿಯ ಸಾಮ್ರಾಜ್ಯೆ! ಆದರೆ ಅದರ ಮಹತ್ವ ಆಕೆಗೆ ಅರಿವಿಲ್ಲ; ಗರ್ಭವತಿಯಾಗುವುದು, ಮಗುವಿಗೆ ಜನ್ಮ ನೀಡುವುದು ಬಳ್ಳಿ ಹೂವನ್ನು ಬಿಡುವಷ್ಟೇ ಸಹಜಕ್ರಿಯೆಯಂತೆ ಆಕೆ ಭಾವಿಸುತ್ತಾಳೆ. ಬೇರೆಯವರು ಕೈ ಎತ್ತಿ ಮುಗಿಯುವವರೆಗೂ ಮಹತ್ತಿಗೂ ತನ್ನ ಮಹತ್ವ ಗೊತ್ತಿರುವುದಿಲ್ಲವಂತೆ! ಶಿಶುಜನನವಾಗುವುದು, ಹೂವು ಬಳ್ಳಿಯಲ್ಲಿ ಅರಳುವುದು ಕೃತಿರಹಸ್ಯದ ಪವಾಡವಿದ್ದಂತೆ. ಆ ಕೃತಿ ರಹಸ್ಯದ ಪವಾಡ ಪಾಮರದೃಷ್ಟಿಗೆ ಕಾಣುತ್ತದೆಯೇ? ಕಾಣುವುದಿಲ್ಲ. ಆದರೆ ಕವಿ! ಬ್ರಹ್ಮಶಿಲ್ಪಿಯ ಪರಮ ಪವಿತ್ರವಾದ ಕಲೆಯ ಕೈವಾಡವನ್ನು ಕಂಡು, ದರ್ಶನಗೊಂಡು ರೋಮಾಂಚನಾಗುತ್ತಾನೆ, ರಸವಶನಾಗುತ್ತಾನೆ.

ನರರೂಪದಲ್ಲಿ ಮಾತ್ರವಲ್ಲ; ಕೃತಿರೂಪದಲ್ಲೂ ಭಗವಂತನ ಅವತಾರವಾಗುತ್ತದೆ ಎಂಬ ದರ್ಶನದ ಕವಿ ಕುವೆಂಪು. ಶಿಶುಜನನ ಸೃಷ್ಟಿಯ ಬೆರಗು. ಅದು ಕವಿಕೃತಿಗೆಂದೂ ಕೀಳಲ್ಲ. ಆದರೆ ಅಂತಹ ಅದ್ಭುತವಾದ ಮಹತ್ವ ಅದರ ಕರ್ತೃವಿಗೇ ಕಾಣುವುದಿಲ್ಲ! ಆದರೆ ರಸಿಕನಾದ ಕವಿಗೆ, ಸಹೃದಯನಿಗೆ ಅದು ಕಾಣುತ್ತದೆ. ಯಾವುದು ಯಾವುದಕ್ಕೆ ಹೋಲಿಕೆ. ರಾಮನನ್ನು ಅನುಸರಿಸಿದವರೆಲ್ಲಾ ಅಂಜನೇಯನಿಗೆ ಉಪಮೆಯೇ?

ಕವನದ ಕೊನೆಯ ಎರಡು ಸಾಲುಗಳಂತು ದರ್ಶನದಿಂದ ಆವಿರ್ಭವಿಸಿದಂತವು. ಸಾಮಾನ್ಯವಾಗಿ ಹೆಂಡತಿಯನ್ನು ಅರ್ಧಾಂಗಿ ಎಂದು ಕರೆಯುತ್ತಾರೆ. ಇಲ್ಲಿ ಕವಿ 'ಪೂರ್ಣಾಂಗಿ' ಎಂಬ ಕವಿಯೆ ಸಂಬೋಧನೆ ವಿಶೇಷವಾದುದು. ತಮ್ಮ ಪೂರ್ಣಾಂಗಿ, ಮಂಗಳಕೃತಿಗೆ ಕಲಾರಂಗವೆಂದು ಭಾವಿಸುತ್ತಾರೆ. 'ತೇಜಸ್ವಿ ಪೂರ್ಣಚಂದ್ರ ಶರೀರೆ' ಎಂಬ ಮಾತು ಗರ್ಭವತಿಯಾದ್ದರಿಂದ ನಿನ್ನ ಶರೀರ ಪೂರ್ಣಚಂದ್ರ ಸಮವಾದ ತೇಜಸ್ಸಿನಿಂದ ಕೂಡಿದೆ ಎಂಬುದನ್ನು ಧ್ವನಿಸುತ್ತದೆ. ಆದರೆ ದರ್ಶನದ ಅಂತರತಮನ್ನು ಅರಿತವರಾರು? ಕವಿಗೆ ತನ್ನ ಪೂರ್ಣಾಂಗಿಯ ಉದರದಲ್ಲಿರುವ ಶಿಶು ಗಂಡು ಎಂಬುದು ದರ್ಶನವಾಗಿತ್ತೋ ಏನೋ! ? ಕವಿತೆ ಪ್ರಾರಂಭದಲ್ಲಿಯೇ 'ದಿವ್ಯಾರ್ಭಕಂ' ಎಂಬ ಮಾತು ಬಂದಿದೆ. ಅರ್ಭಕ ಎಂಬುದಕ್ಕೆ ಸಣ್ಣದು; ಚಿಕ್ಕದು, ಮೊಲೆಗೂಸು, ಎಳೆಯ ಕೂಸು ಎಂಬ ಅರ್ಥಗಳ ಜೊತೆಗೆ ಪುಲ್ಲಿಂಗ ಭಾವವನ್ನು ಸ್ಫುರಿಸುವ ಪುಟ್ಟ ಬಾಲಕ, ಸಣ್ಣ ಹುಡುಗ ಮೊದಲಾದ ಅರ್ಥಗಳೂ ಇವೆ. ಮುಂದೆ ಹುಟ್ಟಲಿರುವ ಕೂಸಿಗೆ 'ಪೂರ್ಣಚಂದ್ರ ತೇಜಸ್ವಿ' ಎಂಬ ಹೆಸರನ್ನು ಮೊದಲೇ ಸೂಚಿಸಿರುವಂತೆ ಕಾಣುತ್ತದೆ! ಮುಂದೆ ಮಗು ಹುಟ್ಟಿದಾಗ 'ಕುಮಾರ ಸಂಭವ' ಕವಿತೆಯಲ್ಲಿ 'ಪ್ರೇಮಾಂಗಿನಿಯೇ ನನ್ನ ಕುವರನಾಗಲಿ ಪೂರ್ಣಚಂದ್ರಸಮ ತೇಜಸ್ವಿ: ಕಾಂತಿ ಶಾಂತಿಯನಿತ್ತು ನಲಿಸುವ ರಸತಪಸ್ವಿ! ' ಎಂಬ ಮಾತು ಬರುತ್ತದೆ.

ಈ ಕವಿತೆಯ ಶಿಲ್ಪದ ಬಗ್ಗೆ ಒಂದೆರಡು ಮಾತು ಹೇಳಬೇಕೆನ್ನಿಸುತ್ತದೆ. ನಾಲ್ಕು ನಾಲ್ಕು ಸಾಲುಗಳಂತೆ ಮೊದಲ ಮೂರು ಪದ್ಯಗಳು ಹಾಗೂ ಕೊನೆಯಲ್ಲಿ ಎರಡು ಸಾಲುಗಳು ಬಂದಿರುತ್ತವೆ. ಮೊದಲ ಮೂರೂ ಪದ್ಯಗಳ ಒಟ್ಟು ದರ್ಶನ ಕೊನೆಯ ಎರಡು ಸಾಲಿನಲ್ಲಿ ಕೆನೆಗಟ್ಟಿದಂತಿದೆ. ಮೊದಲ ಮೂರು ಪದ್ಯಗಳನ್ನು ಬೇರೆ ಬೇರೆಯಾಗಿ ಓದಲು ಸಾಧ್ಯವೇ ಇಲ್ಲ! ಮೊದಲ ಪದ್ಯದ ಕೊನೆಯ ಸಾಲಿನ ಕೊನೆಯ ಪದ 'ಬಳ್ಳಿ' ಎಂಬುದು ಅರ್ಥವಾಗಬೇಕಾದರೆ ಎರಡನೆಯ ಪದ್ಯದ ಮೊದಲ ಸಾಲಿನ 'ಹೂ ಹಡೆವುದಲ್ತೆ? ' ಎಂಬುದನ್ನು ಓದಿಕೊಳ್ಳಲೇ ಬೇಕು. ಹಾಗೆಯೇ ಎರಡನೆಯ ಪದ್ಯದ ಕೊನೆಯ ಸಾಲಿನ 'ತವ ಸೃಷ್ಟಿ' ಎಂಬುದು ಮೂರನೆಯ ಪದ್ಯದ ಮೊದಲ ಸಾಲಿನಲ್ಲಿ 'ಕವಿಕೃತಿಗೆ ಕೀಳಲ್ಲ' ಎಂದು ಮುಂದುವರೆಯುತ್ತದೆ. (ಈ ರೀತಿಯ ಪದ್ಯದಿಂದ ಪದ್ಯಕ್ಕೆ ಮುಂದುವರೆಯುವ ಪದ್ಧತಿ ಪಂಪನ ಕಾವ್ಯದಲ್ಲೂ ಇದೆ. ಪಂಪನಲ್ಲಿ ಕಂದ ಪದ್ಯದಿಂದ ಮತ್ತೊಂದು ಕಂದ ಪದ್ಯಕ್ಕೆ, ಕೆಲವೊಮ್ಮೆ ಪದ್ಯದಿಂದ ಗದ್ಯಕ್ಕೆ(ವಚನಕ್ಕೆ) , ಗದ್ಯದಿಂದ ಪದ್ಯಕ್ಕೆ, ವೃತ್ತದಿಂದ ವೃತ್ತಕ್ಕೆ ಈ ರೀತಿಯ ಮುಂದುವರಿಕೆಯನ್ನು ಕಾಣಬಹುದು.)
COMMENTS OF THE POEM
READ THIS POEM IN OTHER LANGUAGES
Close
Error Success