ಬೆಳಗು Poem by Praveen Kumar in Bhavana

ಬೆಳಗು

ಪೂರ್ವ ದಿಗಂತದ ನಸುಕಿನ ಮುಸುಕು
ಮೆಲ್ಲನೆ ಹರಿದು ಹಬ್ಬಿದೆ ಬೆಳಕು,
ಪರಲೋಕದ ದಿವ್ಯ ಜ್ಯೋತಿಯ ಪುಂಜ
ನೇಸರ ಕಿಚಿಡಿಯ ಮೀರುತ ಚೆಲ್ಲಿದೆ,
ಚೆಂಗದಿರನ ಚೇತನ ಕತ್ತಲೆ ದೈತ್ಯನ
ಮೆಲ್ಲನೆ ದೂಡಿದೆ ಮುಗಿಲಿನ ಮರೆಗೆ,
ಮಲಗಿದ ಪ್ರಕೃತಿ ಜ್ಞಾನದ ಬೆಳಕಲಿ
ತಾಮಸ ತಿಕ್ಕಿ ಬರುತ್ತಿದೆ ಹೊರಗೆ.

ಏನೋ ನವೀನತೆ, ಏನೋ ಉಲ್ಲಾಸ,
ಏನೋ ಆತುರ, ಹೊಸತರ ರಾಗ,
ಗಿಡಮರ ಹಕ್ಕಿಗೆ ಬೆಳಕಿನ ಧಾರೆ
ತಂದಿದೆ ಹೊಸಜೀವ, ಬದುಕುವ ಭಾವ,
ನೀರವತೆಯ ಮಧ್ಯೆ ಚಿಲಿಪಿಲಿ ನಾದ,
ಕನಸಿನ ನೆನಪಿನ ಜೀವ ಮೇಲಾಟ
ಬೆಳಗಿನ ಬಿಂಕಕೆ ಹಚ್ಚಿದೆ ಬೆಂಕಿ,
ಹಬ್ಬಿದೆ, ಹರಡಿದೆ ಹರ್ಷೊನ್ಮಾದದ ಜ್ವಾಲೆ.

ನೇಸರ ಕಿರಣದ ಧಾರೆಯ ಕೆಳಗೆ
ನಿಸರ್ಗ ಮೀಯುವ ಮೋಡಿಯ ನೋಡಿ,
ತಳತಳ ತೊಳೆದ ಮೈಮೇಲಿನ ಹೊಳಪು
ತಂದಿದೆ ಧರೆಗೆ ಸ್ಪಟಿಕದ ರೂಪು,
ಬೆಳಕಿನಲ್ಲದ್ದಿದ ಕರಿಕೂದಲ ರಾಶಿ
ಆಕಾಶದಲ್ಲೆಲ್ಲ ಹರಡಿದೆ ನೋಡಿ,
ವೈಯಾರದಿ ಸೆರಗ ದಿಗಂತಕೆ ಹರಡಿ
ಮೈಯೊದ್ದೆಯ ಬೆಳಕಲ್ಲದ್ದಿರುವುದ ನೋಡಿ.

ನಿನ್ನೆದು ನಿನ್ನೆಗೆ, ಹೊಸತನ ಇಂದಿದೆ,
ಹೊಸ ದಿನ, ಹೊಸಮನ, ಹೊಸ ಹೊಸ ಭಾವ:
ನೋಡಿ, ಶೃಂಗಾರದ ನಾಚುವ ನವವಧು
ಭರವಸೆ ಬೆರೆತ ಲೌಕಿಕ ಲೋಕಕೆ
ಬೆಳಗಿನ ರೂಪದಿ ಬಿಂಕದಿ ಬರುವುದ,
ಕತ್ತಲೆ ಲೋಕಕೆ ಬೆಳಕನು ತರುವುದ,
ನೇಸರ ರಥಿಕ ಚಮ್ಮಟಿಕೆಯ ಚಿಮ್ಮಿಸಿ
ಮೂಡುವ ಚೆಲುವನು ನಾಡಿಗೆ ಬೆಸೆವುದ.

Friday, April 29, 2016
Topic(s) of this poem: morning
COMMENTS OF THE POEM
READ THIS POEM IN OTHER LANGUAGES
Close
Error Success