ಸ್ವಾಭಿಮಾನ Poem by Praveen Kumar in Bhavana

ಸ್ವಾಭಿಮಾನ

ತುಪಾಕಿ ಗುರಿ ಸಿದ್ಧವಿಟ್ಟು ಶತ್ರು ಸೇನೆ ನಿಂತಿದೆ
ದಕ್ಷಿಣೋತ್ತರ ದಿಕ್ಕಿನಲ್ಲಿ, ಪೂರ್ವ ಪಶ್ಚಿಮ ಗಡಿಗಳಲ್ಲಿ,
ಮಧ್ಯೆ ಕದನರೇಖೆ ಎಳೆದು ಸಾಲು ಸಾಲು ಗುಂಪು ನಿಂತು
ಕರೆಯುತ್ತಿರುವರು ಯುದ್ಧಕೆ;
ಮೈಕಚ್ಚಿರುವ ಸ್ವಾಭಿಮಾನ ಕವಚವೊಡೆದು
ನನ್ನ ಮನೆಯಲಿ ತಮ್ಮ ಹೆಜ್ಜೆ ಹೂತಿಡಲೆಂದು
ನನ್ನ ರಾಜ್ಯದ ತುಂಬ ತಮ್ಮಸ್ಥಿತ್ವ ಮುದ್ರಿಸಲೆಂದು
ಕೋವಿ ತುಪಾಕಿಯ ಹಿಡಿದು,
ಕೊನೆಗೆ ಕತ್ತಿ ಬಡಿಗೆಯ ಹಿಡಿದು
ಸಾಲು ಸಾಲಲಿ ಜನರಾಶಿ ಕದನಕಾತುರರಾಗಿ
ಕಾಲು ಕರೆದು, ಮದ ಮತ್ತು ಹರಿಸಿ
ಕದನ ಸರದಿಗೆ ಕಾಯುತ್ತಿಹರು.

ಹಲವು ಪದರಿನ ಕೆಳಗೆ ಬೆಳೆದ
ಹಲವು ಅನುಭವ ಹೀರಿ ಹಬ್ಬಿದ
ಹಲವು ಒದೆತ ತಿಂದು ಕೊಬ್ಬಿದ
ನನ್ನತನ ಹಬ್ಬಿ ನಿಂತಿದೆ ನನ್ನಾಳದಿಂದ.

ಕಳೆದ ದಿನಗಳ ಸ್ಥಿರವಜ್ರ ಬೇರಿನೊಳಗೆ
ನಾಳೆಗಳ ಕಪ್ಪು ಆಘಾತ ತರಲು,
ಕಣ್ಣು ಕುಕ್ಕಿ ಹಬ್ಬುತ್ತಿರುವ ದಟ್ಟ ಬಿಸಿಲು ಬೆಳಕಿನಲ್ಲಿ
ಕಾರ್ಮುಗಿಲ ದಟ್ಟ ಮ್ಲಾನತೆಯ ತರಲು,
ಸಂಚುಹೊಂಚು ಹಾಕಿ ಸುತ್ತು ಅಸುರ ಪಡೆಗಳು ನಿಂತಿವೆ,
ಬಾಯಿಬಿಚ್ಚಿ, ನಾಲಗೆಯ ಕಚ್ಚಿ ರಕ್ತರುಚಿಗೆ ಕಾದಿವೆ.
ಹಲವು ಒದೆತ ಬಿದ್ದಿವೆ,
ಅಘಾತ ಮಳೆಗಳೆ ಸುರಿದಿವೆ,
ದಟ್ಟ ಬಿಸಿಲು ಕಾರ್ಮುಗಿಲಿನಿಂದ ಇಂದು ಮ್ಲಾನಗೊಂಡಿದೆ;
ಭಯ ಭೀತಿ ಹಬ್ಬಿ ಜಗದಿ ಸ್ವಾಭಿಮಾನ ತಡೆದುದುಂಟೆ?
ನಯವಿನಯದಿ ಗೆದ್ದವರಲ್ಲ ಮೌನಸಾಕ್ಷಿ,

ಹೀಗೆ,

ಸ್ವಾಭಿಮಾನ ಕಟ್ಟು ಭದ್ರ ಕೋಟೆಯಾಗಿ ನಿಂತಿದೆ,
ಸ್ವಾಭಿಮಾನ ಕಟ್ಟು ಭದ್ರ ಕೋಟೆಯಾಗಿ ನಿಂತಿದೆ,
ಸ್ವಾಭಿಮಾನ ಕಟ್ಟು ಭದ್ರ ಕೋಟೆಯಾಗಿ ನಿಂತಿದೆ,
ದ್ವೇಶಬೆಂಕಿ ಚೆಂಡುಗಳನು ತಾತ್ಸಾರದಿಂದ ತಡೆದಿದೆ.
ಸ್ವಾಭಿಮಾನ ದಾರಿ ಬಿಡುವ ಪರಿಪಾಟ ಮಾಡಿರೆಂದು
ಆದೇಶ ಉಪದೇಶವೆಂದು ದಿನ ಪಾಠ ಮಾಡುವರು,
ಮೈಯ ಸಡಿಲಿಸಿ ಬನ್ನಿ, ತಮ್ಮಿಚ್ಛೆ ಚೌಕಟ್ಟಿಗೆ ನಿಲ್ಲಿ,
ಭಾರ ಮರೆತರೆ ನೀವು ಹಾರಿ ಆಕಾಶವೇರುವಿರು,
ಭಾರ ಹಿಡಿದರೆ ಬಿದ್ದು ಮಣ್ಣು ಸೇರುವಿರೆಂದು
ವಜ್ರಕವಚವ ಕೊರೆದು ನುಗ್ಗಲು ಬರುವ ಶತ್ರುಮಿತ್ರರನೇಕ
ಮೇಲೆತ್ತಿ ವಿಷದ ಹೆಡೆ
ಕಾದಿರುವರು ಮತ್ತೊಂದು ಕಡೆ;
ವಿಷವೇರಿ ಬಗ್ಗದ, ಸುಡದ, ಒಡೆಯದ,
ರಕ್ತಹಂಚಿ, ಹುಟ್ಟಿಬಂದ ನನ್ನ ದಟ್ಟ ನನ್ನತನವು
ಬೆನ್ನು ಬಗ್ಗಿ ಬದುಕದು, ನನ್ನೊಡನೆ ಮಸಣಕೆ ಬರುವುದು,
ಎಲ್ಲ ಬಾಹ್ಯ ಧಾಳಿ ತಡೆದು ಮನೆಗೆ ನೆಮ್ಮದಿ ತರುವುದು.

ನನ್ನ ರಕ್ತ, ನನ್ನ ನಾಡಿ ತುಂಬಿ ನಿಂತ ನನ್ನ ಶಕ್ತಿ,
ನನ್ನ ಹಿರಿಯ ಜೀವಗಳು ತಂದು ಕೊಟ್ಟ ಮಹಾಶಕ್ತಿ
ಉಕ್ಕುಕವಚವಾಗಿ ಎದೆಸುತ್ತಿ ಎದ್ದು ನಿಂತಿದೆ,
ಕದನ ಸಿದ್ಧ ಶತ್ರುಗಳಿಗೆ ಸೂಕ್ತ ಒದೆತ ಕೊಡಲಿದೆ.

ನನ್ನೆಲುಬು ಗೂಡಿನ ಮಧ್ಯೆ ರಾಜರೋಷದಿ ಹರಿವ
ಪಾದರಸ ಪರರಿಗೇಕೆ ಗಂಟಲ ಬಾಧೆಯಾಗಿದೆ?
ಸಂದುಗೊಂದಿನಲಿ ನಡೆದು ರೂಢಿುಲ್ಲ,
ಹೊಲಸು ಮೆಟ್ಟಿ ಹೆಜ್ಜೆ ಹಾಕಲಿಲ್ಲ,
ಉಸಿರಿರುವವರೆಗೆ ತಲೆಯೆತ್ತಿ ಬದುಕುವುದು ಗೊತ್ತು,
ಬದುಕಿನಾಸೆಗೆ ಬದುಕದು ಸತ್ತು ಸತ್ತು,
ಏನೇ ಬರಲಿ, ಬಗ್ಗದೆ ಕುಗ್ಗದೆ ಸಹಿಸಿ ದಾಪುಗಾಲು ಹಾಕುವುದು,
ಏಕೆಂದರೆ,
ಬುದ್ಧಿ ಹೃದಯ ಬೆಸೆದು ಬಂದು ಸ್ವಾಭಿಮಾನವಾಗಿದೆ,
ಯಾರು ಏನು ಎಂಬ ಬಗ್ಗೆ ಪೂರ್ತಿ ಜ್ಞಾನ ಇಲ್ಲಿದೆ,
ಸೋಲೆ ಬರಲಿ, ಗೆಲುವೆ ಬರಲಿ, ಸೂಕ್ತ ಕಾರಣ ಅದಕ್ಕಿದೆ,
ಬಲ ನಿರ್ಬಲತೆ ಎಲ್ಲ ನನ್ನ ಹಲವು ಪದರಿನ ಹಿಂದಿದೆ.

ಚಿಕ್ಕ್ಕಪುಟ್ಟ ಲಾಭಕ್ಕಾಗಿ ನನ್ನತನ ಬಲಿನೀಡೆನು,
ನನ್ನ ಬೇರುಸಾರ ಹೊರತು ಪರರ ಸೊತ್ತು ಬಯಸೆನು,
ನನ್ನ ಪುಚ್ಛ ಬಿಚ್ಚಿ ನಾನು ಮೇಲೆ ಮೇಲೆ ಹಾರಬೇಕು,
ಹಿಂದಿನಿಂದ ಮುಂದಿನದಕೆ ಸತ್ತ್ವಸೇತು ಕಟ್ಟಬೇಕು.
ಸ್ವಾಭಿಮಾನ ಕೋಟೆಯಲ್ಲಿ ಘೋರ ತಪಸ್ಸು ನಡೆದಿದೆ,
ಮೇನಕಾದಿ ವೇಶ್ಯೆಯರ, ಮಹೇಂದ್ರಾದಿ ಸುರಾಸುರ
ಅಡ್ಡಿ ಭಂಗ ನಡೆಯುತ್ತಿದೆ,
ತಪಸ್ಸು ಮತ್ತೂ ನಡೆದಿದೆ.
ಅಘಾತ, ಒದೆತ ತಿಂದ ದೇಹ ಜರ್ಝರಿತವಾಗಿದೆ,
ಆತ್ಮಶಕ್ತಿ ಮಾತ್ರ ಬೆಳೆದು ಬೆಂಕಿಯಂತೆ ಬೆಳಗಿದೆ,
ದಿವ್ಯ ಬೆಳಕು ಮೂಡಿಬಂದು
ಶಾಂತಿ ಶಾಂತಿ ಶಾಂತಿಯೆಂದು
ಲೋಕಕೆಲ್ಲ ಸತ್ತ್ವಮಂತ್ರ ಶಾಂತಿಮಂತ್ರ ಹಬ್ಬಿದೆ.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success