ಸ್ವರ್ಣ ಕೌತುಕ Poem by Praveen Kumar in Divya Belaku

ಸ್ವರ್ಣ ಕೌತುಕ

ಚಿನ್ನದ ಹಣತೆಯ ಸುಂದರ ನಂದಾದೀಪ ಅವಳು,
ಸೌಮ್ಯ ಬೆಳಕಿನಾಕರ, ಕೋಮಲ ಶ್ವೇತ ಹಂಸತೂಲ,
ಸ್ವರ್ಣ ಕೌತುಕ ಅವಳು, ಮಲ್ಲಿಗೆಯ ಹಿತ ಸುಸ್ವಾದ;
ಕಣ್ಣು ಕುಕ್ಕುವಂತಹದಲ್ಲ, ಮನಸು ಒಡೆಯುವವಳಲ್ಲ,
ಅವಳು ಹಿತಮಿತದ ಸಾರ, ಸ್ನಿಗ್ಧ ಚೆಲುವಿನ ಕೂಲ,
ಸನಿಹದವರಿಗೆಲ್ಲ ಸಾಮರಸ್ಯದ ಸಿಹಿ ಸಿಹಿ ಹಾಲುಜೇನು,
ಮಂದಹಾಸದ ಹೊನಲು, ಅವಳು ಅಮೃತದ ಧಾರೆ;
ಮುಂಜಾವಿನ ಹೊಂಬೆಳಕಿನ ಚಾಕ ಚೈತನ್ಯದ ಚಿಲುಮೆ,
ನನ್ನೊಳಗಿನ ತಿಮಿರವನೋಡಿಸುವ ತೇಜಸ್ಸು, ಜ್ಞಾನಗಂಗೆ.

ಅವಳ ಕಣ್ಣಿನ ಸೆಳಕು ಹೂವಿನ ಸ್ಪರ್ಶದ ಹಾಗೆ,
ಅವಳ ಮಾತಿನ ಝರಿ ಚಂದನದ ಸೇಂಚನದಂತೆ,
ಅವಳೊಂದೊಂದು ಮೋಡಿ ಹೃದಯವರಳುವ ರೀತಿ;
ಆತ್ಮ ಆತ್ಮವ ಬೆಸೆವ ಬಂಗಾರದ ಮಿಂಚು ಅವಳು,
ಈ ಭೂಮಿಗಿಳಿದ ಸುರ ಸುಂದರ ದೇವಿಯೆ ಅವಳು;
ನಶ್ವರ ವಿಶ್ವದಲ್ಲೆಲ್ಲ ಕೊನೆಗುಳಿವುದು, ಶಾಶ್ವತ, ಒಂದೆ -
ಅವಳ ಸಾತ್ವಿಕ ಚೆಲುವು, ಸಂವೇದನೆ, ಸ್ಫಂದನ, ಭಾವ,
ಅದು ಚಿಗುರುವ ತೃಪ್ತಿ, ಅತುಲ ಆನಂದ, ಹರ್ಷ ವರ್ಷ,
ಆತ್ಮ ಆಂತರ್ಯದ ಆಳದಲಿ ಒತ್ತುವ ಅದರ ಛಾಪ.

ಅಗೋಚರ ಪ್ರಭಾವಲಯದ ಮಧ್ಯೆ ರಾರ್ಜಣಿಯಾಗಿ
ಅವಳು ಹರಿಸುವ ಶಾಂತ ಹಿತ ಸುಖದ ಅಮೃತದ ಧಾರೆ,
ಅವಳಾಂತರ್ಯ, ಬಾಹ್ಯದ ಚೆಲುವು, ಬೆಸುಗೆ, ಸಮ್ಮಿಲನ -
ಅವಳು ಈ ಲೋಕದವಳಲ್ಲ, ಸ್ಠೃಯ ಉತ್ತುಂಗ ಪ್ರತಿಭೆ ಕಲಶ,
ಕತ್ತಲನು ತೊಡೆದು ಬೆಳಕು ತರುವ ಸ್ಠೃಯ ಉರು ಚಮತ್ಕಾರ;
ಹೂವು ಸುಕೋಮಲತೆಯಲ್ಲಿ ಕರುಣೆಯ ಉತ್ಕಟತೆ ಅವಳು,
ಪ್ರೀತಿಯ ಸುಕುಮಾರತೆಯಲ್ಲಿ ತ್ಯಾಗದ ಕಠೋರತೆಯೆ,
ನಿರ್ಧಾರದ ಚಂಚಲತೆಯಲ್ಲಿ ದೃಢ ನಿರ್ಧರವೆ ಅವಳು;
ತನ್ನನ್ನೆ ಉರಿದು ಬೆಳಕು ಕೊಡುವ ಪುಣ್ಯ ನಂದಾದೀಪ.

ಉರಿವ ಬೆಂಕಿಯನು ಕಾಗದದಲ್ಲಿ ಕಟ್ಟುವುದುಂಟೆ?
ಅವಳ ಅನನ್ಯತೆಯ ಶಬ್ದದಲಿ ಹಿಡಿಯುವುದುಂಟೆ?
ಬೆಳಕಿನ ಪುಂಜ, ಗಂಧದ ಸೌಗಂಧ, ರಸ ಸಂಗೀತ -
ಮುಪ್ಪುರಿ ಅವಳು, ಅಲೌಕಿಕತೆಯ ಹಿತ ಲೌಕಿಕ ರೂಪ;
ಸಮಗ್ರ ಲೌಕಿಕತೆÀ, ಇಂದ್ರಿಯಗಳ ಹಿತ ಸಮುತ್ತುಂಗ ಸೆಳೆತ,
ಬಯಕೆಯ ಮಹಾಪೂರ, ಸಮಾಗಮದ ನೆರೆ ಉತ್ಕಟತೆ;
ಅವಳ ಬಿಗಿಹಿಡಿದು, ಬೆರೆತು, ನುಡಿಸಿ ನಾವೊಂದಾಗಬೇಕು,
ಆ ಬೆಳಕು, ಸೌಗಂಧ, ನಿರಾಳ ಸಂಗೀತದಲಿ ಈಡಿ ಈಜಾಡಿ,
ಬೆಸೆದು, ಮಥಿಸಿ, ಮೊಳೆಸಿ, ಅವಳಲ್ಲಿ ಜೀವ ತುಂಬಬೇಕು.

Wednesday, April 27, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success