ನಮ್ಮ ಆಶೆ Poem by Praveen Kumar in Divya Belaku

ನಮ್ಮ ಆಶೆ

ನೀನೆಲ್ಲೇ ಇರು, ನೀ ಹೇಗೂ ಇರು,
ನೀನೊಂದು ದಿನ ಇಲ್ಲಿ ಬರಲೇ ಬೇಕು,
ನೀರಿನಲ್ಲಿರು ನೀನು, ಗಾಳಿಯಲ್ಲಿರು,
ನೀನು ನನ್ನನ್ನು ಬೇಗ ಸೇರಲೇಬೇಕು.

ನೀರನ್ನು ಬಿಟ್ಟು ಮೀನು ಬದುಕುವುದುಂಟೆ?
ಹೃದಯಮಿಡಿತ ಬಿಟ್ಟು ಜೀವ ನಿಲ್ಲುವುದುಂಟೆ?
ಏನಿದ್ದರೂ ಇದು ಬರಿಯ ಕಾಲದ ಎಳೆತ,
ವಿಷಗಳಿಗೆ ತಂದಿಟ್ಟ ವಿರಹದ ಬರಿ ಕುಣಿತ,
ಜೀವಗಳೆರಡು ಹೀಗೆ ಜೊತೆ ಚಡಪಡಿಸುವಾಗ
ಕಾಲವದೆಷ್ಟು ಕಾಲ ಮಧ್ಯೆ ನಿಲ್ಲುವುದು ಸಾಧ್ಯ?

ಅಸಾಧ್ಯ ವಿಘ್ನಗಳು ಮಧ್ಯೆ ಇರುವುದ ಕಂಡು
ಕನಸುಗಳು ಕರಗಿ ಸೊರಗುವುದು ಸತ್ಯ,
ನಿನ್ನ ನನ್ನ ಒತ್ತಾಸೆಗಳ ತೀವ್ರತೆಯ ಕಂಡು
ಕಾಲನಿರ್ಣಯ ಕೂಡ ಬದಲಾಗುವುದೆ ಸತ್ಯ.

ಸಾಗರದ ಮೇಲ್ಮೈಯ ಬೇರ್ಪಡಿಸಿದಂತೆ,
ಆಕಾಶಕ್ಕೆ ತಂತಿಯ ಬೇಲಿ ಬಿಗಿದಂತೆ
ನಿನ್ನ ನನ್ನ ಮಧ್ಯದಲ್ಲಿ ವಿಧಿಯ ದೌಡು
ಬರಿ ಸೊನ್ನೆ, ಬರಿ ಕೆಲ ಕಾಲದ ಕಸರತ್ತು,
ಪ್ರೀತಿಯತಿಶಯದಿ ಬಿಗಿದ ಜೀವಗಳ
ಬೇರ್ಪಡಿಸುವ ಅಳುವೆ ಕಪಟ, ಅಪ್ರಾಕೃತ.

ಯುಗಯುಗಾಂತರದ ನಮ್ಮ ಮಿಡಿತ,
ಕ್ಷಣವೂ ನಿಲ್ಲದ ಕ್ಷಣಕ್ಷಣದ ತುಡಿತ
ಪೊಳ್ಳಾಗಿ ಕೈಬಿಡದೆಂಬ ಭರವಸೆ
ನಮ್ಮ ಮುನ್ನಡೆಸುವ ಏಕೈಕ ಆಶೆ.

ನಮ್ಮದೊಂದೊಂದು ಜನ್ಮಾಂತರದ ತಪಸ್ಸು,
ನಿಷ್ಠೆ ಶೃದ್ಧೆಗಳೇ ನಮ್ಮಾರ್ಪಣೆಯ ಸವಿ ಹವಿಸ್ಸು;
ನಮ್ಮಾಶೆ ಯುಗಾಂತರ ಹುರಿಗೊಂಡು ನಿಂತು,
ನಾವೆಲ್ಲೇ ಇರಲಿ, ಹೇಗೆ ಯಾವ ಬಗೆಯಲ್ಲಿರಲಿ,
ನೀನು ನಾನು ಸೇರಬೇಕು, ಒಂದಾಗಿ ಬೆರೆಯಬೇಕು,
ಮತ್ತೆ ಬೇರೆಯಾಗದಂತೆ ಕಾಲಹುರಿಯ ಬಿಗಿಯಬೇಕು.

READ THIS POEM IN OTHER LANGUAGES
Close
Error Success