ನಾವೊಂದಾಗಬೇಕು Poem by Praveen Kumar in Divya Belaku

ನಾವೊಂದಾಗಬೇಕು

ಬಾನೆತ್ತರಕೆ ಎದ್ದು ನಿಂತವಳೆ
ನನ್ನೆತ್ತರಕೆ ಇಳಿಯಲಾಗದೇಕೆ?
ಮೋಡಗಳ ಮರೆ ನಗುವವಳೆ
ನನ್ನೆದುರೆ ನೀನು ನಗಬಾರದೇಕೆ?

ಕಾಮನ ಬಿಲ್ಲಿನ ಮೈಮೇಲೇರಿ
ಬಣ್ಣದ ಮೋಡಿ ಚೆಲ್ಲುವವಳೆ,
ನಿನ್ನ ಬಣ್ಣದ ಮೋಡಿ ತೋರಿ
ಮೈಮನ ತುಂಬ ಹಬ್ಬು ಬಾ.

ಗಾಳಿಯಾಗಿ ನೀನು ಹಬ್ಬಿರುವಾಗ,
ತಂಪಾಗಿ ನನ್ನನ್ನೆಲ್ಲೆಡೆ ತಬ್ಬಿರುವಾಗ,
ಈ ನಿನ್ನ ಹಾವಭಾವ, ವೈಯಾರ
ನನ್ನ ಹೀಗೆ ಮೂದಲಿಸುವುದೇಕೆ?

ನೀನೇನೂ ದೂರದಲ್ಲಿಲ್ಲ,
ಬಹಳ ಹತ್ತಿರಾನೂ ಅಲ್ಲ,
ನಮ್ಮಿಬ್ಬರ ಮಧ್ಯದ ದೂರ
ಮನಸಿನಂತರ ಮಾತ್ರ.

ನನ್ನ ದೊಡ್ಡ ಕನಸು ನೀನು,
ನಿನ್ನ ದೊಡ್ಡ ನೆನಸು ನಾನು,
ನಮ್ಮ ಕನಸು ನೆನಸಿನ ಸಂಕ
ನಮ್ಮನಮ್ಮ ಜೋಡಿಸದೇಕೆ?

ಸಂಕೋಚದ ಸಂಕಲೆಯಲ್ಲಿ
ನಿನ್ನ ನೀನು ಬಿಗಿದಿಟ್ಟುಕೊಂಡು,
ಲಜ್ಜೆಚಿಪ್ಪಿನೊಳಗಡೆ ಅಡಗಿ
ನನ್ನ ಹೀಗೆ ತತ್ತರಿಸಬೇಕೆ?

ನಿನ್ನೊಳಗು ಹೊರಗು ಗೊತ್ತಿರುವಾಗ,
ಅಂಗೈಮಧ್ಯೆನೇ ನೀನಿರುವಾಗ,
ನಿನ್ನೆಲ್ಲವನ್ನೂ ತಿಳಿದೂ ತಿಳಿದು
ಏನೋ ವಿಹ್ವಲತೆ ಒಳಗೆ ಒಳಗೆ.

ನೀನು ಹೆಜ್ಜೆ ಹಾಕುವವರೆಗೆ,
ಒತ್ತಾಸೆ ಬಿತ್ತರಿಸುವವರೆಗೆ,
ಪ್ರಥ್ವಿರಾಜ ಸಂಯುಕ್ತರಂತೆ
ನಿನ್ನನ್ನೆತ್ತಿ ಒಯ್ಯುವುದು ಸಲ್ಲ.

ಬಾರೆ, ನನ್ನ ಓ ಚೆಲುವೆ,
ನನ್ನಂತರಾಳದ ಮುದ್ದು ಒಲವೆ,
ಸಂಕೋಚ ವಿಹ್ವಲತೆ ಬಿಟ್ಟು
ನಾವು ಒಟ್ಟು ಕೂಡಲೆ ಬೇಕು.

ನನ್ನನ್ನರಿಯದವಳಲ್ಲ ನೀನು,
ನಿನ್ನನ್ನರಿಯದವಳಲ್ಲ ನಾನು,
ಒಂದೊಂದು ಹೆಜ್ಜೆ ಮುಂದೆಯಿಟ್ಟು
ನಡೆದರೆ ಮಾತ್ರ ವಿಜಯ ಸಾಧ್ಯ.

ಕಾಲಮಿತಿಯಲ್ಲೆ ನಡೆದು
ಅದರೊಳಗೆ ಒಂದಾಗಬೇಕು,
ಕಾಲ ಯಾರನೂ ಕಾಯುವುದಿಲ್ಲ,
ಸಾವಧಾನಿಸಿ ಪ್ರಯೋಜನವಿಲ್ಲ.

ನನ್ನೆಲ್ಲೆಡೆ ತುಂಬಿರುವ ನೀನು
ಮುಖಾಮುಖಿ ನನಗೆ ಬೇಕು,
ನಿನ್ನನ್ನೆಷ್ಟು ತುಂಬಿಕೊಂಡರೂ
ನಿನ್ನೊಡನಾಟದ ಆಶೆ ನನಗೆ.

ಎರಡೊಂದಾಗುವ ರುಚಿಯೆ ಬೇರೆ,
ಬಾಹುಬಂಧನದನುಭವದ ಸುಖ
ಅನುಭವಿಸಿದವರಿಗೆನೆ ಗೊತ್ತು,
ಬಾ ಗೆಳತಿ, ನನ್ನ ಸೇರು ಬೇಗ.

ಕೂಡಿ ಇಬ್ಬರೂ ನಡೆದರೆ ಮುಂದೆ
ನಮಗೆ ವಿಜಯ ಖಂಡಿತ ಸಾಧ್ಯ,
ಧೈರ್ಯಸ್ಥೈರ್ಯ ಉತ್ಸಾಹದಿಂದ
ನಾವು ಮುಂದೆ ನುಗ್ಗಬೇಕಷ್ಟೆ.

ಇದು ಹಾಲುಜೇನಿನ ಸಂಬಂಧ,
ಜನ್ಮಜನ್ಮದ ಸವಿ ಅನುಬಂಧ,
ಕ್ಷಣಿಕ ತಡೆಗಳ ಕಡೆಗಣಿಸುತ
ನಾವು ಮುಂದೆ ನಡೆಯಬೇಕು.

ಹಿಂದೆಮುಂದೆ ನೋಡಿದರೆ
ಏನೂ ಪ್ರಯೋಜನ ವಿಲ್ಲ,
ಬೇಕೆಂದಲ್ಲಿ ಎದೆಯ ಕೊಟ್ಟು
ಮುಂದೆಮುಂದೆ ನಡೆಯಬೇಕು.

ನನಗೆ ನನ್ನದೆ ಕೊರತೆ,
ನಿನಗೆ ನಿನ್ನದೆ ಕೊರತೆ,
ಕೊರತೆಗಳ ಒರತೆಗಳ ಮೀರಿ
ನಾವು ಬಳಿ ಧಾವಿಸಬೇಕು.

ಒಟ್ಟಾದ ಸಂಕಲ್ಪಗಳ ಮೀರಿ
ಯಾವುದೂ ನಿಲ್ಲುವುದಿಲ್ಲ,
ನಾವೊಂದಾಗಿ ನಡೆದರೆ ಮುಂದೆ
ನಮ್ಮನ್ನೇನೂ ತಡೆಯುವಂತಿಲ್ಲ.

READ THIS POEM IN OTHER LANGUAGES
Close
Error Success