ಪುನರಾಗಮನ Poem by Praveen Kumar in Divya Belaku

ಪುನರಾಗಮನ

ದಶಕ ದಶಕಗಳ ಗುಂಟ ಕಾಲ ಸೇತುವೆ ಕಟ್ಟಿ,
ಅಳಿದುಳಿದು, ಬಿದ್ದೆದ್ದು, ನೀ ಮುಂದೆ ಮುಂದೆ ಬಂದೆ;
ಗುರಿಯು ತಲಪುವ ತವಕ, ನನ್ನ ಕಾಣುವ ತನಕ
ಭೂಮ್ಯಾಕಾಶಗಳ ಸೀಳಿ, ನಿಹಾರಿಕೆಗಳ ಮೀರಿ,
ಬೆಳಕು ಕತ್ತಲೆ ಮರೆತು, ಎತ್ತಲೆಂದತ್ತ ಅಲೆದು,
ಕುರುಡು ಕತ್ತಲೆಯಲ್ಲಿ, ಏಕಧ್ಯಾನ ಧ್ಯೇಯದಲಿ
ಹೇಗೋ ಏನೋ ಕೊನೆಗೂ ನನ್ನೆದುರು ನಿಂತೆ.

ಕಾಲ ಕಳೆದಿತ್ತು, ನನ್ನ ಬಾಗಿಲು ಬಿಗಿದಿತ್ತು,
ನೀನು ಬಂದಾಗ ಹೊತ್ತು ತುಂಬ ಮೀರಿತ್ತು;
ನನ್ನ ಕಂಡ ಹುಮ್ಮಸ್ಸು ನಿನ್ನ ಕುರುಡಾಗಿಸಿತೋ,
ಬಂದವಳೆ ನೀನು ನನ್ನ ಬಿಗಿದಪ್ಪಿ ಬಿಟ್ಟೆ;
ಕಾಲಯಂತ್ರದ ಅಡಿ ಕುರುಡಾಗಿದ್ದ ನಾನು,
ಲೋಕದರ್ಭಟದಲ್ಲಿ ಕಿವುಡಾಗಿದ್ದ ನಾನು
ನಿನ್ನ ಗುರುತಿಸದಾದೆ, ವಿಸ್ಮಯದಿ ನಿಂತೆ.

ಇದಾವುದರ ಪರಿವೆಯೆ ಇಲ್ಲದ ನೀನು
ಮುಖಕೆ ಮುಖವಿಟ್ಟು ನನ್ನನ್ನಾಶ್ವಾದಿಸಿದೆ;
ಕ್ಷಣಕ್ಷಣವೂ ಬಳಿ ಸುಳಿದು, ನನ್ನೆದುರು ಬಂದು
ಸವಿ ಮಾತು, ಹಸನ್ಮುಖದಿ ಮನತುಂಬಿ ನಿಂತೆ;
ಆ ನಿನ್ನ ನಯವಿನಯ, ಗೌರವದ ತತ್ಫರತೆ,
ತಿಳಿಯದಾವುದೋ ಬಂಧ ಹುರಿಗೊಂಡು ಬಂದು
ನಿನ್ನ ನನ್ನ ಮತ್ತೆ ಬಿಗಿದು ಕಟ್ಟಿತು ನೋಡು.

ಕಾಲವನಗೆದಗೆದು ಹಿಂದೆ ಹಿಂದೆ ಹೋದಾಗ
ಹಿಂದೆ ಮುಂದಿನ ತಂತು ಕಾಲಡರಿ ಬಂತು;
ಚಿನ್ನ ರಥದಲಿ ಕೂತ ನನ್ನ ಶುದ್ಧ ಪುತ್ಥಳಿ ಜ್ಯೋತಿ
ಪುಂಖಾನುಪುಂಖ ಬೆಳಕು ಚೆಲ್ಲುವುದ ಕಂಡೆ;
ಕಾಲಗರ್ಭದ ಒಳಗೆ, ನೂರು ನೆನಪಿನ ಕೆಳಗೆ
ಕಣ್ಣಡರಿಸಿದ ಹಾಗೆ, ನಿನ್ನ ನಾನಲ್ಲಿ ಕಂಡೆ,
ಕಾಲಬೇಲಿಯ ಮುರಿದೀಗ ಬಂದು ನಿಂತುದನು ಅರಿತೆ.

ಅದೇ ಚಿನ್ನದ ಬಣ್ಣ, ಮಲ್ಲಿಗೆಯ ಸ್ವಾದ,
ಅದೇ ಹೊಳಪು ಬೆಳಕು ನಿನ್ನ ಕಣಕಣ ದಿಂದ,
ಅದೇ ಹದ ಮಿತ ಮಾತು, ನಯವಿನಯದ ಹರಿವು,
ಅದೇ ಹಿಂದಿನ ಹೊಳಪು ನಿನ್ನ ಕಣ್ಣೊಳಗಿಂದ
ನಿನ್ನಾತ್ಮ ಹೃದಯದ ಗುಟ್ಟು ಬಿಚ್ಚಿಡುತಿತ್ತು,
ನಿನ್ನ-ನನ್ನಾತ್ಮ ಬಂಧನದ ಕತೆ ಹೇಳುತಿತ್ತು,
ಕಾಲಾಂತರದ ನಮ್ಮೊಳಗಿನ ನೋವ ಹೊರಸೂಸುತಿತ್ತು.

ನಾನು ನನ್ನನ್ನೆ ಮರೆತೆ, ನಿನ್ನ ಬಳಿ ಸೆಳೆದೆ,
ಎದೆಗಪ್ಪಿ ಹಿಡಿದು ನನ್ನ ನಿನ್ನಲ್ಲಿ ಬೆರೆದೆ,
ನಿನ್ನ ಮುಖ ತುಂಬ ನನ್ನ ಮುಖವಿಟ್ಟು ಹೀರಿ,
ಹೃದಯ ತುಂಬುವವರೆಗೆ, ಆತ್ಮ ತಣಿಯುವವರೆಗೆ
ನನ್ನ ಕಣಕಣ ನಿನ್ನ ಬಿಗಿ ಹಿಡಿದಿಟ್ಟುಕೊಂಡು
ನಿನ್ನನ್ನಾಸ್ವಾದಿಸಿದೆ, ಸ್ವೀಕರಿಸಿ ಮೈ ತುಂಬಿ ಕೊಂಡೆ;
ತುಟಿಪಿಟಿಕೆನ್ನದೆ ನಿನ್ನನ್ನೊಪ್ಪಿಸಿ ನೀನು ನನ್ನಲ್ಲಿ ನಿಂತೆ.

ಬಳ್ಳಿಗಳಂತೆ ತಾಚಿ ಬಾಚಿ ಹಿಡಿದು ನಾವು,
ಬಯಕೆಯಬ್ಬರದಲ್ಲಿ, ಸಂತೋಷದುಬ್ಬರದಲ್ಲಿ
ಒಂದಾಗಿ ಮೈಮರೆತು ಉರುಳಿದೆವು, ತೆವಳಿದೆವು,
ಉಜ್ಜುಜ್ಜಿ ಹಿಡಿದು ಹಿಂಜಿ ತಿಕ್ಕಿ, ಆಶೆಯುತ್ಫಾತದಲಿ
ಕೊಟ್ಟು ಪಡೆದು ಹೊಸೆದು, ಬೆಂಕಿಯಂತೆ ಉರಿದು,
ಆಳ ಆಳಕೆ ಅಗೆದು ಬಗೆದು, ಬೆಸುಗೆಗೊಂಡೆವು ನಾವು,
ವಿಯೋಗದ ನೋವು ಬರದಿರಲೆಂದು ಮತ್ತೆ ಮತ್ತೆ.

Tuesday, April 26, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success