ಅಕ್ಟೋಬರ್ 17 Poem by Praveen Kumar in Divya Belaku

ಅಕ್ಟೋಬರ್ 17

ಅಕ್ಟೋಬರ್ ಹದಿನೇಳೆಂದಾಕ್ಷಣ ನವಿರೇಳುವುದೆನ್ನ ಮೈಮನ,
ಹೇಳಬೇಕಾದುದನೆಲ್ಲ ಭಯಬಿಟ್ಟು ನಿನ್ನ ಮುಂದಿಟ್ಟ ದಿನವೇ ಸುದಿನ;
ಕೊಟ್ಟದ್ದನ್ನೆಲ್ಲ ಹಿಡಿಮುಡಿಕಟ್ಟಿ ನೀನು ನನಗೆ ಹಿಂತಿರುಗಿಸಿದ್ದೆ,
ದಿಕ್ಕೆಟ್ಟ ನಾನು ಕಾಲಕಾರಣ ಮರೆತು ಏನೂ ತಿಳಿಯದೆ ಕೊನೆಗೆ
ಒಳಗೊಳಗೆ ದಿನರಾತ್ರಿ ಅಳೆದು ಕಳೆದು ಗುಣಿಸಿ ವಿಭಾಗಿಸಿ ತಿಳಿದು,
ಕೈಮೀರಿದ ಹದನು ಕೈಯಾಡಿಸಿ ನಿನ್ನ ನಿರ್ಬಂಧಿಸಿದುದು ತಿಳಿದು
ನನ್ನೊಳಗಿನ ಭಾವ ಹಾವಭಾವ ನಿನ್ನ ಮುಂದಿಡಲೆಂದು ಬಂದಿದ್ದೆ.

ನಿನ್ನೊಳಗಿನ ನೋವು ಸಂತಾಪದ ಮುದ್ರೆ, ಸಾಕ್ಶ್ಯ ನನ್ನ ಮುಂದಿತ್ತು,
ನಿನ್ನೊಂದೊಂದು ಕಾರ್ಯರೀತಿಕ್ರಮದಲ್ಲನಿವಾರ್ಯತೆಯ ಸುಳಿವಿತ್ತು,
ಮನದಾಳದಿಂದುಕ್ಕೇರಿದ ಕಣ್ಣೀರಿನ ಕೋಡಿಯ ಹೆಜ್ಜೆ ಗುರುತಿತ್ತು,
ನಿನ್ನನನ್ನ ಭದ್ರಭಾಂಧವ್ಯದ ವಜ್ರದುಂಗುರದ ಬಿಗಿತ ನಮ್ಮ ಸುತ್ತಲಿತ್ತು;
ಯಾವ ಲೋಕದ ಯಾವ ನಿರ್ಬಂಧ ಹೀಗೆ ನಿನ್ನನ್ನಾಡಿಸಿತೆಂದು,
ಯಾವ ಕಾರ್ಯಕಾರಣ ಯಾವ ರೂಪದಲಿ ಬಂದು ನಿರ್ಬಂಧಿಸಿತೆಂದು
ತಿಳಿದನುಕಂಪ ಸೂಚಿಸಲೆಂದೆ ನಾನಂದು ನಿನ್ನ ಹುಡುಕಿ ಬಂದಿದ್ದೆ.

ತ್ವರಿತದಿ ಬಂದು, ಅನುಕಂಪದ ಕಣ್ಣ್ಣಿಂದ ನನ್ನ ಕಣ್ಣಿನಾಳ ಹುಡುಕಾಡಿದ್ದೆ,
ನಿನ್ನ ನೋವು ಸಂತಾಪದಾಳವನು ನಿನ್ನ ಹಾವಭಾವದಲಿ ನಾನು ಕಂಡಿದ್ದೆ;
ಅತಿಗಂಭೀರತೆಯು ಹತಾಶೆಗೆ ಮೂಲ, ಸದಾ ನೀನು ನಗುತ್ತಿರಬೇಕು,
ಜೀವನಪಥದಲ್ಲಿ ನಿನ್ನ ನಡೆ ಮುನ್ನಡೆ ಸದಾ ಸುಸೂತ್ರವಾಗಿರಬೇಕು,
ಅತಿ ವಿಲಕ್ಷಣ ಹಿನ್ನಲೆಯಲ್ಲಿ ನನ್ನೆಡೆ ನಿಶ್ಶರತು ಸುಸ್ವಾಗತವೆಂದು,
ನನ್ನೊಳಗಿನ ಗುಟ್ಟನ್ನು ಬತ್ತಲೆಯಾಗಿ ನಿನಗೆ ಬರೆದು ಕೊಟ್ಟಿದ್ದೆ,
ನನ್ನೊತ್ತಾಯಕ್ಕೆ ಮಣಿದು ಬರೆದದ್ದನ್ನೋದಲು ನೀನೊಪ್ಪಿಕೊಂಡಿದ್ದೆ.

ಅಕ್ಟೋಬರ್ ಹದಿನೇಳೆಂದಾಕ್ಷಣ ನವಿರೇಳುವುದೆನ್ನ ಮೈಮನ,
ಹೇಳಬೇಕಾದುದನೆಲ್ಲ ಭಯಬಿಟ್ಟು ನಿನ್ನ ಮುಂದಿಟ್ಟ ದಿನವೇ ಸುದಿನ;
ನೋವು ಕಣ್ಣೀರನು ಮೀರಿ, ಭದ್ರಬಾಂಧವ್ಯದ ಬಿಗಿತ ಮರೆತು,
ನನ್ನ ಹಿತಕ್ಕಾಗಿ ದೂರ ಬಹುದೂರವಿರಲು ನೀನು ನಿರ್ಧರಿಸಿದ್ದೆ,
ಕೊಟ್ಟದ್ದನ್ನೆಲ್ಲ ಹಿಡಿಮುಡಿಕಟ್ಟಿ ನೀನು ನನಗೆ ಹಿಂತಿರುಗಿಸಿದ್ದೆ;
ನಿರ್ಧಾರದ ಬಿಗಿ ಸಡಿಲಿಸದೆ ನೀನು ನನ್ನವಳು ಶಿಸ್ತುಸಂಯಮದಿಂದ
ಜೀವ ಬಿಗಿಹಿಡಿದು, ದೂರ ಬಹುದೂರ ನನಗೆ ವಿದಾಯಕೋರಿದ್ದೆ.

ಅದೆಷ್ಟು ದೂರವಾದರೂ, ನಮ್ಮೊಲವು ಭಾಂದವ್ಯದ ಸೇತು ಕಡಿಯಲಿಲ್ಲ,
ಕಾಲನ ಕಾಲಿನೊದೆತದಿಂದ ನಿನ್ನನನ್ನ ವಿಶ್ವಾಸದ ಕಟ್ಟು ಒಡೆಯಲಿಲ್ಲ,
ನೋವು ಹತಾಶೆಯ ಭರತವು ಹಿತಕನಸಿನ ಭವ್ಯ ಕಟ್ಟಡ ಕೆಡವಲಿಲ್ಲ;
ವರುಷವಾದಂತೆ ಭದ್ರಬಾಂಧವ್ಯದ ಮತ್ತು ಮತ್ತೆ ಮತ್ತೆ ಮುತ್ತುತಿತ್ತು,
ನಿನ್ನನನ್ನ ಬಾಂಧವ್ಯದ ಪುನಶ್ಚೇತನಕೆ ಹೃದಯ ಹಾತೊರೆಯುತಿತ್ತು;
ಹುಡುಕಿ ಬಂದರೆ ಅಡಗಿ, ತಾನಿಲ್ಲವೆಂದು ವಾರ್ತೆ ಕಳುಹಿಸಿದ್ದೆ ನನಗೆ,
ಅನಿವಾರ್ಯತೆಯ ಬಲಿಪಶು, ನಿನ್ನನ್ನು ನೀನೆ ಹಂಗಿಸಿ ದುಃಖಿಸಿ ಶಿಕ್ಷಿಸಿದ್ದೆ.

ಮತ್ತದೇ ಅಕ್ಟೋಬರ್ ಹದಿನೇಳು, ನೋವುನಲಿವಿನ ಸಂದೇಶ ಕಳುಹಿಸಿದ್ದೆ,
ನನ್ನ ಕ್ಷಿತಿಜದಿತಿಮಿತಿಗಳ ನೆಲಗಟ್ಟು ನಕ್ಷೆಗಳ ಬಿಡಿಸಿ ನಿನ್ನ ಮುಂದಿಟ್ಟಿದ್ದೆ-
ನಿನ್ನನಿವಾರ್ಯತೆಯು ನನಗೆ ತಿಳಿಯದುದಲ್ಲ, ನಿಷ್ಠುರತೆಯು ನಮ್ಮಲ್ಲಿಲ್ಲ,
ಒಂದಾಗಿ ಹಬ್ಬಿ ಬೆಸೆದು, ಮರವಾಗಲೆಂದೇ ಹುಟ್ಟಿದ ಕವಲುಗಳು ನಾವು,
ಎರಡು ಜೀವ, ಹೃದಯ, ಮನಸು, ದೇಹಗಳೊಂದಾಗಿ ಹುರಿಗೊಂಡು
ಬಿಗಿತ ಚುಂಬನದಲ್ಲಿ ವಿಲೀನವಾಗುವುದೆ ನಮ್ಮ ದೈವದತ್ತ ದಿವ್ಯ ನ್ಯಾಯ,
ಈ ಸುಖಾತಿಶಯ ಸಮ್ಮಿಳನ ನಿನ್ನನನ್ನ ನಮ್ಮ ಚೇತನದ ಮೂಲ ಧ್ಯೇಯ.

ನಮ್ಮ ಈ ಭಯ ಕಣ್ಣೀರು, ನಮ್ಮ ಬಾಂಧವ್ಯ ಬೆಸೆಯುವ ಶಕ್ತಿ,
ಅಡೆತಡೆಗಳೆಲ್ಲವ ಮೀರಿ, ನಾವೊಂದಾಗುವುದೆ ದಿಟ, ಪರಮ ಸತ್ಯ,
ಇದು ದೈವ ನಿಯಮ, ವಾಗ್ದಾನ, ಪ್ರತಿರೋಧರಹಿತ ಮೂಲ ತತ್ತ್ವ;
ಚಿಂತೆ ಬಿಡು, ಕಾಲಕೂಡುವತನಕ ಕಾಯಬೇಕಾಗುವುದು ಲೋಕನಿಯಮ,
ದಾರಿ ಅದೆಷ್ಟೆ ದುರ್ಗಮವಿರಲಿ, ಕಾಲ ನಿನ್ನನನ್ನ ಬೆಸೆಯುವವರೆಗೆ,
ನಮ್ಮ ವಿಲೀನದ ತೃಪ್ತಿಗೋಸುಗ ಕಾಯುವುದಕೆ ನಾನು ಸದಾ ಸಿದ್ಧ,
ಬೆಳಕಿದೆ ಮುಂದೆ, ನಂಬು, ನಿನ್ನೊಡಗೂಡುವುದಕೆ ನಾನೆಂದೆಂದೂ ಬಧ್ಧ.

ನಾವು ನಡೆಯುವ ದಾರಿ, ಲೋಕ ರೂಢಿಗೆ ಹೊರತು, ಹೊಸತು,
ದಾರಿ ದುರ್ಗಮ ದಿಟ, ನಿರ್ಧರಿಸಿ ನೀನು ದೂರ ನಿಂತರೆ ನಾನು
ಅರಿತು ತಿಳಿದು ಸಹಕರಿಸಿ ನಿನ್ನ ಹಿತಕ್ಕ್ಕಾಗಿ ನಡೆಯುವೆನು ದೂರ;
ನಿನ್ನೊಳಿತನು ಮರೆತು ನಿರ್ಧರಿಸಿ ನನ್ನೊಡಗೂಡುವೆಯಾದರೆ ನಾನು
ಎಲ್ಲ ಇತಿಮಿತಿ ಮರೆತು ಸದಾ ನಿನ್ನೊಡನಿರುವೆನೆಂದಿದ್ದೆ ಅಂದು;
ನೀನೊಪ್ಪಿದ್ದೆ, ಆನಂದಾತಿಶಯದಿ ಉಬ್ಬಿ ಬಾಳು ಸ್ವರ್ಗವೆಂದಿದ್ದೆ,
ಅದು ಸಾಧಿಸುವವರೆಗೆ ಎದೆಕೊಟ್ಟು ಜತನದಿ ಕಾಯಬೇಕು ನಾವು.

Tuesday, April 26, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success