ಬಂಧಿಗಳು Poem by Praveen Kumar in Bhavana

ಬಂಧಿಗಳು

ನಿರಾಳ ನೀಲಾಕಾಶದ ಆಳ ನಮಗೆಲ್ಲಿ ಬರಬೇಕು?
ಮಿಂಚು, ಗುಡುಗು, ಕರಿಮೋಡ, ಸುಳಿಗಾಳಿ ತುಂಬಿರುವ.
ತೇಪೆ ಹಾಕಿದ ಬೆಳಕು ಕತ್ತಲು ಕಣ್ಣು ಕಟ್ಟು ನಡೆಸುತ್ತಿರುವ
ಮ್ಲಾನ ವಿಷಣ್ಣ ಮನಸಿನಾಕಾಶದ ತುಂಬ ವಿಕ್ಷೋಭದ ಹೊರತು,
ನಿರಾಳ ನೀಲಾಕಾಶದ ಆಳ ನಮಗೆಲ್ಲಿ ಬರಬೇಕು?

ವಿಶಾಲ ನೀಲಾಕಾಶದ ವಿಸ್ತಾರವೆಲ್ಲಿಂದ ಬರಬೇಕು;
ಸ್ವಾರ್ಥ ಮತ್ಸರ ಬೆಟ್ಟಕಂದರ, ಕೋಪಲೋಭಗಳಿರುವಲ್ಲಿ,
ಹಸಿವಲ್ಲಿ ಹೋರಾಡಿ ಹೊಟ್ಟೆ ಹೊರೆಯ ಬೇಕಾದಲ್ಲಿ,
ಭಯಭದ್ರ, ದುಗುಡ, ದ್ವೇಶ, ಕ್ಲೇಶ ಭುಗಿಲುಗೊಳ್ಳುವಲ್ಲಿ
ವಿಶಾಲ ನೀಲಾಕಾಶದ ವಿಸ್ತಾರ ವೆಲ್ಲಿಂದ ಬರಬೇಕು?

ಮನಸಿನಾಕಾಶದ ತುಂಬ ಹೊಗೆರಾಶಿಯ ತುಂಬಿ,
ಕಣ್ಣು ಮೂಗಿನ ತುಂಬ ಕಹಿನೀರು ಹರಿಸಿ,
ಉಸಿರು ಕಟ್ಟುವ ನೋವಲ್ಲಿ ಸದಾ ಚಡಪಡಿಸುವ ನಮಗೆ
ಹೊರಾವರಣದತ್ತ ತಿರುಗಲೆಲ್ಲಿದೆ ಬಿಡುವು, ಅವಕಾಶ;
ದ್ಟೃ ಬಿಗಿದಿದೆ, ಮನಸು ಕದಡಿದೆ, ಬುದ್ಧಿಯಲಿ ಹೊಗೆಯಾಡಿದೆ.

ನಮ್ಮದು ಮರದಿಂದ ಮರಕೆ ಹಾರುವ ಮಂಗನಾಟ,
ಬಿಕ್ಕಟ್ಟುಗಳ ಮಧ್ಯೆ ಕಾಲುಕಣ್ಣುಗಳನವರತ ಜಿಗತ,
ನಿಂತು ನೋಡುವ, ತಲೆಯೆತ್ತಿ ಸುತ್ತುವ ವ್ಯವಧಾನವಿಲ್ಲ,
ಮನಧ್ಯಾನಗಳಿಟ್ಟು ಜನ, ದಿನಗಳನರಿಯುವ ಸಮಧಾನವಿಲ್ಲ;
ಮನಸಿನಾಕಾಶದ ಮ್ಲಾನ ಹವಮಾನದ ಬಂಧಿಗಳು ನಾವು.

ನಮ್ಮಕಾಶದಲೆ ಹಾರುವ ಪುಕ್ಕಕಡಿದ ಹಕ್ಕಿಗಳು ನಾವು,
ಮೇಲೇರಿದ ಹಾಗೆ ದೊಪ್ಪನೆ ನೆಲಕ್ಕುರಳ ಬೇಕು;
ಹಬ್ಬಿರುವ ಅಕಾಶ ನೆಲಬಿಟ್ಟು ನಿಲ್ಲುವುದಿಲ್ಲ,
ಆಕಾಶದಲ್ಲೇರುವುದನ್ನು ಬಡಹಕ್ಕಿ ಬಿಡುವುದಿಲ್ಲ,
ಈ ಬಂಧನದ ಬಂಧಿಗಳು ನಮ್ಮ ಸಂದಿಗ್ಧ ದೇಹ ಮನಸು.

Saturday, April 30, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success