ಸೂತ್ರಧಾರ Poem by Praveen Kumar in Bhavana

ಸೂತ್ರಧಾರ

ನಿನ್ನನೇನೆಂದು ಸ್ತುತಿಸಲಿ ನಾನು ಸೂತ್ರಧಾರ,
ವಿಧವಿಧದ ವಿಧಿಯಿಂದ ವೇದ್ಯವಾಗದಾಟವನಾಡಿ,
ಮೇಲೇರುವ, ಕೆಳಗಿಳಿಯುವ ಕಲಸುಮೇಲೋಗರದಲ್ಲಿ
ರಸವರ್ಣ ತರ್ಪಣವನೀವ ಲೋಕದಿಗ್ಧರ್ಶಕನೆ,
ನೀತಿನಿಯಮ ಜಂಜಾಟ, ಕಾರ್ಯಕಾರಣ ಮೀರಿ
ನಿರ್ವಾತದಿ ಪರ್ವತವನೆ ತರುವ ದಿವ್ಯ ಮಂತ್ರ,
ಲೋಕಗಳ ನುಂಗಿ ಮರೆಸುವ ಕತ್ತಲಿನ ಕುಂಡ,
ಅಣು-ಭೂ ಮಂಡಲದಲ್ಲಿ ಕಣ್ಣಿಟ್ಟಲ್ಲಿರುವ
ನಿರಾಕಾರಿ, ನಿನ್ನನೇನೆಂದು ನುತಿಸಲಿ ನಾನು.

ನಿನ್ನಾಟದ ಮಿತಿಯನ್ನರಿತ ಜ್ಞಾನ ಹುಟ್ಟಿಲ್ಲ,
ನಿನ್ನೋಟದ ವೇಗ ವಿಜ್ಞಾನವಳೆದಿಲ್ಲ;
ನೀನಿಟ್ಟದ್ದೆ ಸತ್ಯ, ನೀ ನಡೆಸಿದ್ದೆ ಮಾರ್ಗ,
ನಿನ್ನ ನೆತ್ತದಲ್ಲಾಡುವ ನಿರ್ಜೀವ ಬೊಂಬೆಗಳು ನಾವು,
ನಿನ್ನಾಟಕ್ಕೆ ಕಾಲಿಡುವ ನಮ್ರ ಸೈನಿಕರು;
ನಿನ್ನ ಲೆಕ್ಕಾಚಾರ ನಮ್ಮ ಗಣಿತದಿ ಭಿನ್ನ,
ನಿನ್ನ ಹಿಡಿತದ ಬಿಗಿತ ಹುಟ್ಟುಸಾವಿಗೂ ತಪ್ಪಿಲ್ಲ;
ನೀನೆಲ್ಲಿಂದೆಲ್ಲಿಗೆ ನಡೆವೆ ಕಂಡವರಿಲ್ಲ,
ನೀನೆಲ್ಲಿಲ್ಲ, ಹೇಗಿರುವೆ ತಿಳಿದವರಿಲ್ಲ,
ನಿನ್ನಾಟದ ಹೂಟದಲ್ಲೆದ್ದೇಳುವವ ನೀನು.

ನಿನ್ನೊಲವಿನ ಕೃಪೆಗೆ ಪರಿತಪಿಸುವ ಜನರಾಶಿ,
ನಿನ್ನನರಿಯಲು ಪಟ್ಟ ಕಷ್ಟಗಳೆಷ್ಟೊ;
ತತ್ವ ವಿಜ್ಞಾನ ಜ್ಯೋತಿಷ್ಯ ದೂರದರ್ಶನವೆಂದು
ನಿನ್ನ ಬೆನ್ನಲ್ಲಿ ಬಿದ್ದು, ಬೇಸ್ತು ಬಿದ್ದವರೆಷ್ಟೊ,
ನಿನ್ನೆತ್ತರಕ್ಕೆಲ್ಲಿ ನಾವೇರುವೆವುಹೇಳು;
ಬೆಟ್ಟ ಬುಡದಲಿ ಕೂತು ಗಗನವರಸುವ ನಾವು
ನಿನ್ನೌನತ್ಯ, ಸತ್ಯ ಹೇಗೆ ಗ್ರಹಿಸಲಿ ಹೇಳು;
ನೀಲ ಗಗನದ ಗುಂಟ ನಿನ್ನ ಹೆಜ್ಜೆಯ ಹುಡುಕಿ
ಬಿಳಿಕಪ್ಪು ಮೋಡಗಳೆ ನೀನೆಂದು ಭ್ರಮಿಸುವೆವು.

Saturday, April 30, 2016
Topic(s) of this poem: philosophy
COMMENTS OF THE POEM
READ THIS POEM IN OTHER LANGUAGES
Close
Error Success