ಇದೊಂದು ಹುಚ್ಚಾಸ್ಪತ್ರೆ Poem by Praveen Kumar in Bhavana

ಇದೊಂದು ಹುಚ್ಚಾಸ್ಪತ್ರೆ

ಇದೊಂದು ಹುಚ್ಚಾಸ್ಪತ್ರೆ, ಮತಿಕೆಟ್ಟವರ ಸಂತೆ,
ನಿರ್ಬಂಧನಗಳ ಬಿಚ್ಚಿ ಹುಚ್ಚು ಹಾರಾಡುವವರ ದುಷ್ಟಗೃಹ,
ಅವ್ಯವಸ್ಥೆಯ ಮಧ್ಯೆ ಅವ್ಯವಸ್ಥೆಯ ಹೂತು
ಅವ್ಯವಸ್ಥೆಯ ಕಂಡು ಅತ್ತು ನಗುವವರ ಚಿತ್ರವಿಚಿತ್ರ ಕೋಶ,
ತಮ್ಮೊಳಗೆ ಬೇರೂರಿ, ತಾವಾರೆಂದು ಮರೆತು
ಸುತ್ತು ಮುತ್ತಲು ಕವಿದ ಕತ್ತಲೆಯ ನೆರಳಿಗೆ ಹೆದರಿ
ಕತ್ತಲೆಯಾಳದಲಿ ಕತ್ತಲ ಬೆನ್ನು ಹಿಡಿದಿರುವ
ನಿರ್ಜೀವ ಪ್ರೇತಗಳ ಸತ್ತ ನೃತ್ಯ ಕೇಳಿಗಳ ಶಾಲೆ.

ನಿಯಮ ನಿಯತ್ತು ರಹಿತ ನಿರ್ಭಾರ ನಿರ್ವಾತದಲಿ
ಅಷ್ಟದಿಕ್ಕಿಗೂ ಹರಿವ ದೈತ್ಯ ಭಾವದೊತ್ತಡಕೆ ಸೋತು
ಸುಳಿಗಾಳಿಯಲಿ ಸಿಕ್ಕಿ ಭೂಮಿಗಗನ ತೋಲಾಡುವ ನಿರ್ಬಲರ ಮಧ್ಯೆ,
ನೆಲ ಹಿಡಿದು, ತಲೆಯೆತ್ತಿ ಸ್ಥಿರನಿಂತ ಸತ್ವಸಾಧಕರು
ತುದಿಮೊದಲರಿಯದ ಭ್ರಾಂತಿಯಲಿ ಕಂಗಾಲಾಗಿ ಜಾರುವರು,
ಹುಚ್ಚಾವೇಶಿಗಳೊದೆತದಲಿ ಪೆಚ್ಚಾಗಿ ಪಟ್ಟು ಸಡಿಲಿಸುವರು,
ಹುಚ್ಚು ಜನಜಂಗುಳಿ ಸೇರಿ, ನಿರ್ಭಾರ ಭಾವಕ್ಕೆರವಾಗಿ
ಹುಚ್ಚುರಾಶಿಗಳಡಿಯಲ್ಲಿ ಹೂತು ಮರೆತು ಹೋಗುವರು.

ಕ್ಷಣಕ್ಕೊಂದು ಹೊಸಭಾವ, ಪ್ರತಿನಿಮಿಷ ಬದಲು ರೂಪ,
ವಿನಾಕಾರಣ ಆಳು ನಗುವು, ಶಾಂತಿ, ದ್ವೇಶಾವೇಶ,
ಒದೆತಗಳು, ಹಾರಾತಗಳು, ಅರ್ಥವಿಹೀನ ಮಾತುಗಳು,
ಕಾರ್ಯಕಾರಣ ಸಂಬಧವೀ ಹುಚ್ಚಾಸ್ಪತ್ರೆಗೆ ಹೊರಗು,
ಅರ್ಧಂಬಂರ್ಧ ಯತ್ನಗಳು, ತಿಳಿಯಲಾಗದ ತಿರುವುಗಳು,
ಯಾವ ಹುತ್ತದಿ ಸಾವು ಹೆಡೆ ಬಿಚ್ಚುವುದೆಂಬ ಭಯ,
ಹುಚ್ಚರಲಿ ಹುಚ್ಚಾಗಿ, ಹುಚ್ಚಿನ ಹುಚ್ಚು ಹೊಳೆಯಲಿ ಹರಿದು
ಹುಚ್ಚರ ಲೋಕದಲಿ ಹುಚ್ಚು ನಟಿಸುವುದೆ ಲೇಸು.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success