ವಿಶ್ವಪರ್ಯಟನ Poem by Praveen Kumar in Bhavana

ವಿಶ್ವಪರ್ಯಟನ

ನಡಿಯುತ್ತಿದೆ ವಿಲಕ್ಷ ವಿಶ್ವಪರ್ಯಟನ,
ಅನಾದಿಯಿಂದ ಅನಂತದವರಗೆ,
ನಿರಾಕಾರದಿ ಮಹಾಕಾರದವರೆಗೆ
ಕಾಲ, ಆಕಾರದ ವಿಶ್ವಪರ್ಯಟನ,
ವಿಶ್ವರೂಪದ ವಿರಾಟ ವಿಸ್ಪೋಟನ;
ಬೇರು ಬೀಜದ ನಡುವೆ ಗಿಡ ಮರಗೆಲ್ಲು,
ಎಲೆ, ಫಲ, ಹೂವು ಮಾಯೆ ವಿಸ್ಪೋಟದ ಹಾಗೆ;
ರುಚಿ, ಸ್ಪರ್ಷ, ಗಾನ, ಘ್ರಾಣ, ವರ್ಣ ವಿನ್ಯಾಸ
ಕವಲೊಡೆದು ವಿಕಸನ ವಿಸ್ಪೋಟಿಸುವ ಹಾಗೆ,
ನಡೆಯುತ್ತಿದೆ ಅನವರತ ಅನಿಯಂತ್ರಿತ ಕ್ರಿಯೆ.

ಮುಂದೆ ಹಿಂದೆ ದಾರಿ ಕಣ್ಣೋಡಿಸುವವರೆಗೆ,
ಅನಾದಿ ಅನಂತದ ನಡುವಿನ ನಾಟಕ ರಂಗ;
ಮಧ್ಯೆ ಎದ್ದ ಬಿದ್ದ ಜೀವರೂಪುಗಳೆಷ್ಟೊ!
ಅಮೂರ್ತದಿ ಮೂಡಿದ ರಾಗಸಂವೇದಗಳೆಷ್ಟೊ!
ಕಾಲಚಕ್ರದ ಗುಂಟ ಏರಿಳಿತವ ಕಂಡ
ಜೀವನ ತಾಳತಾನದ ವಿಗತ ಸ್ವಾಗತಗಳೆಷ್ಟೊ!
ಜೀವನಿರ್ಜೀವ, ಸೂಕ್ಷ್ಮವಿಸ್ತಾರ ಭೇಧಗಳಿಲ್ಲ,
ಭೌತಭೌತ ಭಾವಭ್ರಮೆ ಭಾಷೆ ಪ್ರಜ್ಞೆಗಳಿಲ್ಲ,
ಕೂಡಿ ಹೆಣೆದು ಬೆರೆತು ವಿಶ್ವರೂಪ ಪ್ರವಾಹ
ಹರಿಯುತ್ತಿದೆ ಮುಂದೆ ಏಕಪ್ರಕಾರ.

ದಿಕ್ಕುಗತಿ ದಾರಿ ನಿರ್ಧಿಷ್ಟಗೊಳಿಸಿದವರಿಲ್ಲ,
ದಾರಿಗುಂಟ ವಿಮರ್ಶೆ ದಾರಿತೋರುವುದಿಲ್ಲ,
ಇದೊಂದು ವಿಚಿತ್ರ ಕುರುಡುಪರ್ಯಟನ,
ಅನವರತ ನಡೆಯುವ ಅನಿಯಂತ್ರಿತ ಯಾನ,
ಹುಟ್ಟು ಸಾವನು ಮೀರಿ ನಡೆಯುವ
ಮೂಲದೊಳಗಿನ ಮೂಲ, ನೈಜ್ಯವತನ,
ಯಾನಗಳ ಯಾನ, ವಿಶ್ವಪರ್ಯಟನ,
ಜೀವ ಜೀವದ ಜೀವ, ವಿಕಸನ, ಚೇತನ,
ಮುಂದೆ ಮುಂದೆ ಮುಂದೆ ಸಾಗುತ್ತಿರುವಂತೆ
ಕಣ್ಣು ಮುಚ್ಚಿ ಮುಂದೆ ಕಾಲಿಡುವ ಪಶುಗಳ ಸಂತೆ

ನಡೆಯುತ್ತಿದೆ ವಿಲಕ್ಷ ವಿಶ್ವಪರ್ಯಟನ,
ಕೂಡಿ ಹೆಣೆದು ಬೆರೆತು ವಿಶ್ವರೂಪ ಪ್ರವಾಹ
ಹರಿಯುತ್ತಿದೆ ಮುಂದೆ ಏಕಪ್ರಕಾರ.

Friday, April 29, 2016
Topic(s) of this poem: philosophy
COMMENTS OF THE POEM
READ THIS POEM IN OTHER LANGUAGES
Close
Error Success