ವಿಜ್ಞಾನ Poem by Praveen Kumar in Bhavana

ವಿಜ್ಞಾನ

ಯಾಕೆ ಹೇಗೆಂಬ ಕುತೂಹಲದ ಸರಮಾಲೆ,
ಪ್ರಕೃತಿಯ ಮೈಬಿಚ್ಚಿ ನಿಲ್ಲಿಸಿದೆ ನೋಡು;
ಉಬ್ಬು ತಗ್ಗುಗಳ ಗೋಪ್ಯದ ಸ್ವಾರಸ್ಯದ ಮಧ್ಯೆ,
ಹೊಸ ಸ್ಠೃಗಳು ಸ್ಖಲನಗೊಳ್ಳುತ್ತಿವೆ ನೋಡು.

ಪರದೆ ಸರಿದಂತೆ, ನಿಜ ಬಯಲಾದಂತೆ,
ಜ್ಞಾನದಾಹದ ಮದಕೆ ಭುವಿ ಮೈಯೊಡ್ಡಿದಂತೆ,
ಅಗೋಚರತೆ ಕೌತುಕತೆ ತೀಟೆ ಕೆಳಗಿಳಿದಾಗ,
ತೊತ್ತಿನ ಸೊತ್ತಾಗಿರಿಸಿ ದುಡಿಸುವರು ನೋಡು.

ಕಾಣಲಾರದುದ ಕಂಡು, ಕಾಣ ಬಾರದುದ ಕಂಡು,
ಸ್ಥಿತಿಗತಿಗಳ ತಾಳಹೆಜ್ಜೆ ತಪ್ಪುತ್ತಿದೆ ನೋಡು;
ಭೂತ ಭವಿಷ್ಯತ್ತಿನ ಕೊಂಡಿ ವರ್ತಮಾನದಿ ಕಳಚಿ,
ನಗ್ನ ನಿರ್ವಾತದಲಿ ಜೀವ ಕಂಗಾಲಾಗಿದೆ ನೋಡು.

ನೋಡುವುದು ಕೆಲವು, ನೋಡಬಾರದು ಹಲವು,
ಸುಖ ಸೌಂದರ್ಯದ ಮೊತ್ತ ಮೊದಲಿನ ಗುಟ್ಟು;
ಸಪ್ತ ಸಾಗರದಲ್ಲಿ ಕೈ ಮೈ ದೇಹ ತಿಕ್ಕದವನಿಗೆಲ್ಲಿ
ನವೀನತೆಯ ಸ್ವಾರಸ್ಯ ಜೀವ ತುಂಬುವುದು ಹೇಳು.

ಪ್ರಕೃತಿಯ ತೊತ್ತಾಗಿರಿಸಿ ಸೇವೆ ಮಾಡಿಸಿಕೊಂಡು
ಲೋಕ ಜುಸಿದೆವೆಂದು ಭ್ರಾಂತು ಪಡುವವರುಂಟು,
ತಾಳ ತಪ್ಪಿದ ಬಳಿಕ, ಜೀವ ಸಂಸರ್ಗ ನಡೆಯದೆ ನಿಸರ್ಗ,
ರೆಂಬೆ ಕೊಂಬೆಗಳೆಂತು ಹೂವು ಫಲ ನೀಡುವುದು ಹೇಳು.

ದೂರವಳಿಯುವ ಜೊತೆಗೆ ದೂರಗಳು ಹುಟ್ಟುವವು,
ಕಾಲವುಳಿಯುವ ಕ್ಷಣವೆ ಅಕಾಲಗಳೆರಗುವುವು;
ವಿಜ್ಞಾನ ಸಮುದ್ರವ ಕಡೆದು, ಕ್ಲೇಶದುಗುಡದ ವಿಷವ
ಬಡಿಸಿ ಲೋಕದ ಚಿತ್ರ ಬದಲಿಸುವುದು ಸರಿಯೆ?

ಸರಳ ಚಿತ್ರದ ಮೇಲೆ ಕ್ಲಿಷ್ಟ ಬಣ್ಣಗಳ ಚೆಲ್ಲಿ,
ಹೊಸ ಚಿತ್ರ, ಹೊಸ ಲೋಕ ಸ್ಟೃಸಿದವರಿಲ್ಲ,
ವಿಜ್ಞಾನ ಬಿನ್ನಾಣದಲಂಕಾರದ ಚಮತ್ಕಾರ,
ಹಿಡಿದ ದಾರಿಯ ಮರೆಸಿ ಕಂಗೆಡಿಸುವುದು ನೋಡು.
ನಿಸರ್ಗ ಮರ್ಮದ ಸವಿಯ ಬಿಚ್ಚಿ ಕೆಡಿಸಿದ ಮೇಲೆ,
ಎಲುಬು ಚರ್ಮದ ಗಣಿತ ಬದುಕಿಗುಳಿಯುವ ದ್ವಾರ,
ಎಲ್ಲವೂ ಎಲ್ಲರಿಗೆ, ನಮ್ಮಳವು ಮೀರಿದುದಿಲ್ಲ ನಿಜ,
ವಿಜ್ಞಾನದೀ ವಿಜಯದಲಿ ನಿಜ ತೃಪ್ತಿ ಬರುವುದೆ ಹೇಳು.

Friday, April 29, 2016
Topic(s) of this poem: science
COMMENTS OF THE POEM
READ THIS POEM IN OTHER LANGUAGES
Close
Error Success