ಪಹರೆ Poem by Praveen Kumar in Bhavana

ಪಹರೆ

ಮೆದು ತಿರುಳಿನ ಹೊರಗೆ ದಪ್ಪನೆಯ ಚಿಪ್ಪು ಚಂದ,
ಸೌಗಂಧವಿರುವ ಹೂವಿಗೆ ಮುಳ್ಳು ಕಳ್ಳಿ ಬೇಲಿ ಚಂದ,
ಜ್ಞಾನವೆಂಬ ಬೆಳಕಿಗೆ ಕತ್ತಲೆಂಬ ಪಹರೆ ಚಂದ,
ಅಭೇದ್ಯ ಶಾಂತಿಗೆ ದ್ವಂದ್ವ ತುಮುಲ ಹೋರಾಟ ಚಂದ.

ರಕ್ತ, ಕಣ್ಣೀರು, ಬೆವರು ಮಧ್ಯೆ ಸುಖದ ಬೀಜ ಬೆಳೆದರೆ
ಬಿಡುವ ಹೂವು ಸುಗಂಧಮಯ
ಬರುವ ಹಣ್ಣು ಅಮೃತದ ಸಿಹಿ;
ಕೆಸರಿನಲ್ಲಿ ಕಮಲವಿರಲಿ,
ಹೊಲಸಿನಲ್ಲಿ ಜೀವ ಕೀಟವಿರಲಿ,
ಸ್ಟೃ ಕ್ರಿಯೆ ಅಪರಿಶುದ್ಧದಲ್ಲಿ,
ಹೋರಾಟದಲ್ಲಿ, ಜಂಜಾಟದಲ್ಲಿ.

ಹೃದಯಕ್ಕೊಂದು ಗೂಡು ಬೇಕು,
ಮೆದುಳಿಗೊಂದು ಬುರುಡೆ ಬೇಕು,
ಆಳುವವಗೆ ಕೋಟೆ ಬೇಕು,
ಸಂಪತ್ತಿಗೊಂದು ತಿಜೋರಿ ಬೇಕು;
ಎಲ್ಲ ಎಲ್ಲರಿಗೆಂದು ಬಿಚ್ಚುವ
ವೇಶ್ಯೆಗೇನು ಮಾನ ಗೊತ್ತು?
ಉಗುರು ಕೆರೆದು, ಹಲ್ಲು ಕಡಿದು,
ಎಡಕೆ ಬಲಕೆ ನೋಟ ಎಸೆದು,
ಅಳೆದು, ಕಳೆದು, ಗುಣಿಸಿ, ಎಣಿಸಿ,
ಸ್ವಲ್ಪ ಸ್ವಲ್ಪ ಮಿತಿಯನರಿತು
ಹೊರಗೆ ಕೊಡುವ ಹಿಡಿತ ಬೇಕು.

ಹಿಮ, ಧೂಳು, ಬಿರುಗಾಳಿ, ಬಿಸಿಲು,
ಒಮ್ಮಿಂದೊಮ್ಮೆ ಹಬ್ಬಿ ತುಂಬಿ,
ಹೊಳಪು ಮಾಸಿ, ಒಡಕು ತರುವ
ಜಾಡ್ಯ ಹಿಡಿದ ಪರಿಯಾವರಣದಿಂದ
ರಕ್ಷೆಗಾಗಿ ಒಂದು ಹೆಜ್ಜೆ
ಹಿಂದಿನಿಂದ ನಡೆಯಬೇಕು.

ಒಳಗೆ ಅಂತ: ಪುರದ ಸ್ಥಾನ,
ಹೊರಗೆ ಪಹರೆ ಕಾರಸ್ಥಾನ;
ಬಲದ ಗತ್ತು, ಭಯವನಿತ್ತು
ನುಸುಳುವವನ ಕಿತ್ತುುಟ್ಟು
ಮೊದಲಾಘಾತ ನೀಡಬೇಕು;
ಬದುಕಿದವನು ಒಳಗೆ ಬರಲಿ,
ಗರ್ಭಗುಡಿಗೆ ಹೆಜ್ಜೆ ಇಡಲಿ;
ಅದು ಅಭಿಮಾನಿಯ ಮಂದಿರ,
ಅಲ್ಲೆ ಸುಖದ ಸಂಕರ.

ಮೊದಲ ನೇರ ಹೊಡೆತದಿಂದ
ಕಾಲ ನೆಲದ ಅರಿವು ತಂದು,
ಕಾರ, ಹುಳಿ, ಒಗರು ತೋರಿ,
ಮತ್ತೆ ಉಪ್ಪು ಸಿಹಿಯ ಕೊಟ್ಟು,
ಮೂಗುದಾರ ಭದ್ರ ಹಿಡಿದು
ನೇರ ಒಳಗೆ ನಡೆಸಬೇಕು;
ಹಿಡಿತ ಮೀರುವವರ ಹೊರಗೆ
ನಿರ್ದಾಕ್ಷಿಣ್ಯದಿ ತಡೆಯಬೇಕು,
ಮತ್ತೆ ಸನಿಹ ಬರದಿರೆಂದು
ಇದ್ದಬಿದ್ದ ಒದೆತದಿಂದ
ಸೂಚ್ಯ ಸಂಜ್ಞೆ ಪ್ರಜ್ಞೆುಟ್ಟು
ಎದೆಯನೆತ್ತಿ ನಡೆಯಬೇಕು.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success