ಬೆಳಗಾಗುತ್ತಿದೆ Poem by Praveen Kumar in Bhavana

ಬೆಳಗಾಗುತ್ತಿದೆ

ಬೆಳಗಾಗುತ್ತಿಹುದು, ಲೋಕ ಬೆಳಕಾಗುತ್ತಿಹುದು,
ಕತ್ತಲೆ ಕೆಂಪಾಗಿ ಕರಗಿ ಬಿಳಿಯಾಗುತ್ತಿಹುದು,
ಲೋಕ ಸ್ಫಟಿಕ ಹೊಳಪಿನಲಿ, ತಿಳಿ ಬೆಳಕಿನ ಹೊಳೆಯಾಗಿ
ಹೊಸ ಹುರುಪಿನ ಸುಳಿಯನ್ನು ಎಬ್ಬಿಸಿದೆ, ನೋಡಿ;
ಗಿಡಮರದ ತುದಿಯಲ್ಲಿ, ಮನೆ ಮನೆಯ ಚಾವಡಿಯಲ್ಲಿ
ಜೀವಂತಿಕೆಯ ಗದ್ದಲವನ್ನೆಬ್ಬಿಸಿದೆ ಮೋಡಿ;
ತಾಮಸದ ತಲೆಮೇಲೆ ಬದುಕು ಹಂಬಲ ಕಾಲೂರಿ
ನವೀಕತೆಯ ಮೋಡಿ ದಿಕ್ಕು ದಿಕ್ಕಲಿ ಹಬ್ಬಿ
ಹೊಸ ದಿನದ ನಾಂದಿ ಹಾಡುತ್ತಿದೆ ನೋಡಿ.

ದೇವಲೋಕ ದ್ವಾರಗಳು ಅಗಲವಾಗಿ ತೆರೆದು
ಬೆಳಕು ಪುಂಜದ ಸಾಲು ದಿಕ್ಕು ದಿಕ್ಕಲಿ ಹರಡಿ
ದೇವತ್ವ ಲೋಕಕ್ಕೆ ಜಿಗಿಯುತ್ತದೆ ನೋಡಿ,
ಮಲಗಿದ್ದ ಲೋಕ ಹೊಸ ಚೇತನಕೆ ಸ್ಪಂದಿಸಿದೆ,
ನವೋತ್ಸಾಹದ ಧಾರೆ ನೆಲಾಕಾಶಗಳ ತಬ್ಬಿ
ಜೀವ ಜೀವದ ಒಳಗೆ ತುಂಬುತಿದೆ ಶಕ್ತಿ;
ಏನೋ ಹಿತ ಉನ್ಮಾದ, ಪ್ರಕೃತಿಯ ಶುಭ ಸಂಗೀತ
ಮೂಡಲಿನ ನಾಭಿಯೊಳಗಿಂದ ಬರುತ್ತಿದೆ ಹೊರವುಕ್ಕಿ,
ಬೆಳಕಾಗಿ, ಸೆಲೆಯಾಗಿ, ಜೀವಂತಿಕೆÉಯಾಗಿ.

ಜೀವಗಳರಳುತ್ತಿವೆ, ಜೀವನ ಮೊಳದೆಯೊಡೆಯುತ್ತಿದೆ,
ನಸು ಬೆಳಕಿನ ಶುಭ್ರ ಪ್ರವಾಹದ ಮಧ್ಯೆ,
ಹೊಸ ಜ್ಞಾನ, ಹೊಸ ರೂಪ ಹೊಸತಾಗಿ ಕವಲೊಡೆಯುತ್ತಿವೆ
ಕತ್ತಲೊಳಗಿಂದ ಬೆಳಗು ಬೆಳಕಾಗುವಾಗ;
ಹೊಸ ದಾರಿ, ಹೊಸ ಯಾತ್ರೆ, ಅನುಭವಗಳ ಸರಮಾಲೆ
ಹಕ್ಕಿಗಳ ಚಿಲಿಪಿಲಿಯಲ್ಲಿ, ಬದುಕಿನ ಕಲರವದಲ್ಲಿ
ಸುಸ್ವಾಗತ ಹಾಡುತ್ತಿವೆ, ಓಂಕಾರಗರೆಯುತ್ತಿವೆ;
ನೇಸರನೊ ಮದುಮಗನಂತೆ, ಮೆರವಣಿಗೆಯ ಮಧ್ಯೆ,
ಬೆಳಕಿನೇಣಿಯನೇರಿ ಮೂಡಣದಿ ಬರುತ್ತಿಹ ನೋಡಿ.

Friday, April 29, 2016
Topic(s) of this poem: sunrise
COMMENTS OF THE POEM
READ THIS POEM IN OTHER LANGUAGES
Close
Error Success