ಹೃದಯ ಹಕ್ಕಿ Poem by Praveen Kumar in Bhavana

ಹೃದಯ ಹಕ್ಕಿ

ಓ ಹಕ್ಕಿ, ಹೃದಯ ಹಕ್ಕಿ, ಈ ಪರಿಯ ದಿಗಿಲೇಕೆ?
ಪಂಜರಬಿಟ್ಟು ಮೇಲೇರೆ ನಿನಗೀ ಅವಸರವೇಕೆ?
ಪಂಜರ ತುಂಬ ಹಿತಗಾಳಿ, ಹಿತ ಬೆಳಕು ಹಬ್ಬಿರುವಾಗ
ರಕ್ಕೆ ಬಿಚ್ಚಿ, ಹೊರ ಹಾರಿ ಸೇರಬೇಕು ಯಾವ ಜಾಗ?

ಬಯಸಿದ್ದು ಇಲ್ಲಿ ಉಂಟು, ಬಹುಕಾಲದ ಸವಿ ನಂಟು
ಬಿಟ್ಟೀಗ ಈ ರೀತಿ ಹಾರಿದರೆ ಏನುಂಟು?
ಕಾಲೂರಿ ನೀ ನಿಂತು, ಹಳೆ ನೋವುಗಳ ಮರೆತು
ನಿನ್ನ ಸವಿ ಚಿಲಿಪಿಲಿ ಹಾಡು, ಎಲ್ಲರಲ್ಲಿ ನೀ ಬೆರೆತು.

ಅಸಂಖ್ಯಾತ ದೇಹಗಳು ಗೊಂದಲದಲ್ಲಿ ಚಲಿಸುವಾಗ,
ಅತಿ ಪ್ರಖರ ಬೆಳಕಲ್ಲೂ ಗ್ರಹಣ ನೆರಳು ಸಹಜ ತಾನೆ,
ಕತ್ತಲಿನ ಬಿಂಬಗಳು ಮಬ್ಬನ್ನು ಚೆಲ್ಲುವಾಗ
ಧೃತಿಗೆಡದೆ ನಿನ್ನತನ ಬೆಳಕಲ್ಲಿ ಇರು ಜಾಣ.

ನಿನ್ನ ಆಳ, ವೈಶಾಲ್ಯ, ಆ ರಾಗ ತೇಜಸ್ಸು
ನಿನ್ನೊಳಗೆ ಸುಡುವಾಗ ಕತ್ತಲಿನ ಛಳಿಯೇಕೆ?
ಬಾಡಿಗೆಯ ಬಿಸಿಯಲ್ಲಿ ನಿಂತಿಲ್ಲ ಆಯಸ್ಸು,
ಒಳಗಿಂದ ಇದೆ ಒಸರು, ನಿನ್ನುಸಿರು ಜೀವಕ್ಕೆ.

ಆಸರೆ ಬೇಡ, ಅಭಯ ಹಸ್ತ ಊರುಗೋಲು ಬೇಡ,
ಮನ ಮರುಗಿ ಕೊಡುವಂತ ಕೃಪೆ ಭಿಕ್ಷೆ ಬೇಡ,
ಕೊಡದಾಗ ಮನ ಮರುಗಿ ಜೀವಂತ ಸೊರಗುವಂತ
ಪರಾವಲಂಬನವು ಎದೆ ಉಬ್ಬಿಸುವ ಬದುಕೆ?

ಉಲ್ಕೆ, ಧೂಮಕೇತುಗಳು ಪರರಿಂದ ಬೆಳಗುವುವು,
ತೆಜಸ್ವಿ ಸೂರ್ಯ, ತಾರೆ ತಾವಾಗಿ ಬೆಳಕು ಚೆಲ್ಲುವುವು,
ಆಕಾಶದುದ್ದ ಹಬ್ಬಿರುವ ಧೂಮಕೇತುವನು ಕಂಡು
ಸೂರ್ಯ ತಾರೆ ಮಸಕಾಗಿ ಸೇರುವವೆ ಕ್ಷುದ್ರ ಖಗ ಹಿಂಡು?

ಓ ಹಕ್ಕಿ, ಹೃದಯ ಹಕ್ಕಿ, ಹಾಡು ನಿನ್ನ ಹೃದಯ ಹಾಡು,
ನಿನ್ನ ತಾಳ ಧಾಟಿಯಲಿ, ನಿನ್ನಾತ್ಮರಾಗ ಹಾಡು ಹಾಡು,
ನಿನ್ನೊಳಗಿಗೆ ನೀಡು ರೂಪ, ಆ ಮೇಲೆ ಸ್ವಂತಿಕೆ ನೋಡು,
ಪದ್ಮರಾಗ ರಾಶಿ ನೀನು, ಕರುಬುವುದೆ ಗಾಜುಮಣಿ ಕಂಡು?
ನೀನಿರುವ ಪಂಜರವು ಸುಖಶಾಂತಿ ಹಂದರವು,
ದೇವ ದೇವತೆ ಯಕ್ಷ ಇಂದ್ರ ಹಂಬಲಿಸುವ ಮಂದಿರವು,
ಭೂತ ನೆರಳುಗಳ ಮರೆತು, ನಿನ್ನ ಎತ್ತರ ನೀನರಿತು,
ಮತ್ತೆ ಮತ್ತೆ ಬೆಳೆಯಬೇಕು, ನಿನ್ನೊಳಗೆ ನೀ ನಿಂತು.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success