ಒಂದೊಂದು ಹೂವು Poem by Praveen Kumar in Bhavana

ಒಂದೊಂದು ಹೂವು

ಒಂದೊಂದು ಹೂವು, ಒಂದೊಂದು ಚೆಲುವು,
ಒಂದೊಂದು ರಾಗ, ಒಂದೊಂದು ಸಂಗೀತ;
ಅದಾವ ಅಮರಾವತಿಯ ಚಿನ್ನದ ತೋಟದ
ಬೆಡಗು ಲಾವಣ್ಯ ರಂಗು ಬಿಡಿಸಿದ ಇಲ್ಲಿ?

ರಂಗುರಂಗಿನ ಸ್ವಾದ, ದಂಗು ಬಡಿಸುವ ಮೇಳ,
ಸೂಜಿಗಲ್ಲಂತೆ ಸೆಳೆದು ಉದ್ದೀಪಿಸಿದೆ ಜೀವ,
ಮೈತುಂಬ ಹರಿದು ಮಿಂಚು ಮೂಡಿಸುವ ರೂಪ,
ತಂಗಾಳಿ ಹೆಗಲೇರಿ ಸುಳಿದು ಕಾಡುತ್ತಿದೆ ಹೃದಯ.

ಒಂದೊಂದು ಜೀವ, ಏನೊಂದು ಸೌಂದರ್ಯ,
ದೇವಲೋಕದಿಂದಿಳಿದು ಹರಿದಾಡುತ್ತಿದೆ ಇಲ್ಲಿ;
ಕುಡಿದಷ್ಟು ಕಡಿಮೆ, ಕಣ್ಣು ಕಂಡಷ್ಟು ಹಸಿವು,
ಹೃದಯಗಳ ಹೆಣೆದು ಉದ್ಧೀಪಿಸಿದೆ ಪ್ರೀತಿ.

ಎಲ್ಲಿಲ್ಲದ ಈ ವೈವಿಧ್ಯ, ಮನ ತಣಿಸುವ ವೈಯಾರ,
ಸೊಗಸೆಲ್ಲ ಬಸಿದು ಬೆಸೆದು ಸೇರಿದೆಯೊ ಇಲ್ಲಿ!
ಕಣ್ಣಿಟ್ಟಲ್ಲಿ ರೂಪರಾಶಿ, ಅಂಚಂಚಲ್ಲಿ ಸೆಳೆತ,
ಸಂತೋಷ ಉಕ್ಕೇರಿ ಹೃದಯ ಒಡೆಯುತ್ತಿದೆ ಮೆಲ್ಲ.

ಏರಿಳಿತದ ಮೇಳ, ಬಣ್ಣ ಹೊಳಪಿನ ಜಾಲ,
ಮೈಮಾಟದ ಮೋಡಿ, ನಗು ನಡಿಗೆಯ ನೋಡಿ,
ಇದು ಭೌತ ಸೊಗಸಲ್ಲ, ಆತ್ಮ ಸೌಂದರ್ಯ,
ಸಾಹಿತ್ಯ ಸಂಗೀತದ ಸ್ಪೂರ್ತಿ, ದೈವಿಕ ಸ್ಠೃ.

ಆ ಕಣ್ಣಿನ ಮಾಟ, ನಸುನಗುವಿನ ಆಟ,
ವಿದ್ಯುತ್ತಿನ ನೋಟ, ಹೃದಯ ಹೃದಯದ ಕೂಟ,
ತಿಕ್ಕ ತೊಳೆದಂತ ನಮ್ರ ತಾಮ್ರ ಮೈ ಬಣ್ಣ,
ಅದರಲ್ಲಿ ಮೇಲೆದ್ದ ಏರಿಳಿತದ ಸಿಹಿ ಜಲ್ಲೆ.

ಹಾವಭಾವದ ತುಂಬ ಗಾಂಭೀರ್ಯ, ಲಾಲಿತ್ಯ,
ಸೌಂದರ್ಯ ಕಾರಂಜಿ ಇದು, ಎಂತಹ ಚೆಲುವು!
ಆ ಚೆಲುವಿನ ಸುಳಿಯಲಿ, ಆನಂದದ ಮಡುವಲಿ,
ಮುಳುಗಿ ನಾನೆದ್ದು ಹೊಸ ಮಾನವನಾದೆ.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success