ತುಳುನಾಡು Poem by Praveen Kumar in Bhavana

ತುಳುನಾಡು

ಪಡುವಣ ಕಡಲಿನ ಮಡಿಲಿನ ಮೇಲೆ
ಮರಾಠ, ಕನ್ನಡ, ಮಲಯಾಳದ ನಡುವೆ
ಮಳೆಕಾಡಿನ ಚೆಲುವಿನ ಪದರಿನ ಕೆಳಗೆ
ಬಿಸಿಗಾಳಿಯ ತೇವದ ಜೀವಂತಿಕೆಯಲ್ಲಿ
ಅಭಿಮಾನದಿ ನಿಂತಿದೆ ತುಳುನಾಡು.

ಪಶ್ಚಿಮ ಫಟ್ಟದ ಎತ್ತರಕ್ಕೇರಿ,
ಅರಬೀ ಸಮುದ್ರದ ಅಗಾಧತೆ ಸೇರಿ
ಮೂಡಿದೆ ಕೆಚ್ಚೆದೆ, ಪ್ರಜ್ಞೆಯ ನಾಡು,
ಗೌರವ ತ್ಯಾಗ ಸಾಧನೆ ತೋರುವ
ಎಂಟೆದೆ ಭಂಟರ ತುಳುನಾಡು.

ಕನ್ನಡ ಕೊಂಕಣ ಗೆಳೆತನ ಮಾಡಿ
ಮನೆ ತುಂಬಿಸಿದಂತಹ ಅತಿಥೇಯ,
ಸತ್ಯ ಧರ್ಮ ನೀತಿ ಸಂಕಲ್ಪಕ್ಕೆಂದು
ಜೀವವ ಕೊಡುವ ತುಳುಗೂಡು
ಈ ಶಿಸ್ತಿನ ಎಂಟೆದೆ ತುಳುನಾಡು.

ಕಾಲನು ಕೆಳಗಿನ ನೆಲದಲ್ಲಿಟ್ಟು,
ಕಣ್ಣನು ದೂರದ ಗಗನದಲ್ಲಿಟ್ಟು
ಮುಂದಿನ ಗುರಿಗೆ ಹೆಜ್ಜೆಯನಿಡುವ
ಮಗುವಿನ ಮನಸಿನ ಕೇದಗೆ ಜನರು
ಚಿಗುರುವ ನೆಲವೀ ತುಳುನಾಡು.

ಪ್ರೀತಿಗೆ ಪ್ರೀತಿ, ವೈರಕೆ ವೈರ
ನಂಬಿದ ಜನಕೆ ಜೀವವ ಕೊಡುವ,
ವ್ಶೆರಿಯ ವಂಶದ ಬೇರನು ಕೀಳುವ
ಛಲ ಬಲ ತುಂಬಿದ ತುಳುನಾಡಲ್ಲಿ
ವಿನಯ ಸಜ್ಜನತೆಗೆ ದೇವರ ಸ್ಥಾನ.

ತುಳು ಸಾಧನೆಗೆ ಕಸ್ತೂರಿಯ ಸ್ವಾದ,
ತುಳುವರ ಗುಟ್ಟು ವ್ಯವಹಾರದ ಶಿಸ್ತು,
ತುಳುನಾಡಿನ ಹಿರಿಮೆ, ಸಾಧನೆ, ಬುದ್ಧಿ
ದೂರ ದೂರದಲ್ಲೆಲ್ಲ ಬಿಟ್ಟಿದೆ ಕಂಪು,
ತುಳುನಾಡಿಗೆ ತಂದಿದೆ ಗೌರವ, ಗತ್ತು.

ನದಿಗಳು ಹೆಣೆದ ಫಲವತ್ತಿನ ನೆಲದ
ಎದ್ದಿಳಿಯುವ ಭೂಮಿಯ ಸುಂದರ ಬನದ
ತುಳುನಾಡಲ್ಲದೇನಿದೆ ಅಲೌಕಿಕ ಸತ್ವ!
ಇಂದ್ರಿಯ ಗೋಚರ ದಿವ್ಯ ಮಹತ್ವ!
ತುಳು ಪರಂಪರೆ ತಂದ ಶಕ್ತಿ ವ್ಶೆಚಿತ್ರ್ಯ!

Friday, April 29, 2016
Topic(s) of this poem: nation
COMMENTS OF THE POEM
READ THIS POEM IN OTHER LANGUAGES
Close
Error Success