ಸಾಕ್ಷಾತ್ ಶ್ರೀ ದೇವಿ Poem by Praveen Kumar in Divya Belaku

ಸಾಕ್ಷಾತ್ ಶ್ರೀ ದೇವಿ

ಅವಳು ಬರೆ ಹೆಣ್ಣಲ್ಲ, ಕೌತುಕಗಳ ಕಣಜ, ರಾಶಿ,
ನೇರ ನಡೆ ನುಡಿ, ಹೃದ್ಯ ಹೃದಯದ ಪ್ರಾಂಜಲ ಕಾಶಿ;
ಅವಳ ಅನುಷಂಗ ಅಮೃತ ಸೇಂಚನ, ರಸ ವಾಚನ,
ಅವಳು ಬೃಹ್ಮನ ಅಪಾರ ಸ್ಠೃಷ್ಠಿ, ರಸಜ್ಞತೆಯ ವ್ಠೃಷ್ಠಿ.

ಹೆಚ್ಚು ನುಡಿಯುವವಳಲ್ಲ, ಯಾರ ನೋಯಿಸುವವಳಲ್ಲ,
ಪರರದನು ಬೇಕೆಂದು ಬಯಸುವವಳೆ ಅಲ್ಲ;
ಇದ್ದುದರಲೆ ತೃಪ್ತಿ, ಮೇಲಾಟ ಹೋರಾಟಕೆ ವಿರಕ್ತಿ,
ಘನ ದ್ಠೃಷ್ಟ, ನಡೆ ನಿಷ್ಕರ್ಷೆಯಲಿ ಅಸದೃಶ ಮೋಡಿ.

ಒಳಗು ಹೊರಗಿನ ವಿಲಕ್ಷಣ ಸಮೀಕರಣ ಅವಳು,
ಒಳಗೆ ಉಜ್ವಲ ದೀಪ, ಹೊರಗದರ ಪ್ರಜ್ವಲ ಬೆಳಕು;
ಸ್ನಿಗ್ಧ ಚೆಲುವಿನ ಜ್ವಾಲೆ, ಲಾವಣ್ಯ ಸಾಗರ ಅವಳು,
ಹೃದಯದಾಳಕ್ಕಿಳಿದು ಚೈತನ್ಯ ಸೆರೆಹಿಡಿವ ಚೆಲುವು.

ತನ್ನನೊಪ್ಪಿಸಿದರೆ ಅವಳು, ಎಲೆ, ಫಲ, ಬೇರು ಸಹಿತ,
ಆತ್ಮ, ಮನಸು, ಹೃದಯ, ದೇಹಗಳ ಸಂಹಿತ ವಿಹಿತ;
ಅದು ಸಂಪೂರ್ಣ ಸಮರ್ಪಣೆ, ತ್ಯಾಗ, ಏಕೀಕರಣ,
ಆತ್ಮ ಆತ್ಮಗಳ ದಿವ್ಯ ಬೆಸುಗೆಗೆ ನಡೆವ ಭಾಷ್ಪಿಕರಣ.

ತಾನು ತನ್ನದು ತಮಸ್ಸು ಬುಗಟು ಕಾಣದ ಜೀವ,
ದುಂಡು ಮಲ್ಲಿಗೆಯ ತಂಪು, ಕಂಪು, ಅವಳು;
ತನ್ನನ್ನೆ ಸುಟ್ಟು ಸುತ್ತು ಬೆಳಕು ಹಬ್ಬುವ ಅವಳು
ಎಲ್ಲರಂತಲ್ಲ, ಸಾಕ್ಷಾತ್ ಶ್ರೀ ದೇವಿಯೇ ಅವಳು.

ವ್ಯೋಮವಾಹಿನಿ ಅವಳು, ಕ್ಷೀರಪಥದಲ್ಲಿಳಿದೆದ್ದು,
ನಿಹಾರಿಕೆಗಳ ಹುಡುಕಿ, ವಿಶ್ವದಂಚನ್ನು ಬಗೆದು,
ತನ್ನವನನ್ನು ಶೋಧಿಸಿ, ಗೆದ್ದು ಪಡೆದು ಸೇರುವಳು,
ತನ್ನವನಲ್ಲೆ ತನ್ನ ಸುಖ ಶಾಂತಿ ಕಾಣುವಳು.

ಗುರಿಯ ಹೊರತು ಅತ್ತಿತ್ತ ನೋಡುವವಳಲ್ಲ,
ಹಿಡಿದ ದಾರಿಯನೆಂದೂ ಮತ್ತೆ ಬಿಡುವವಳಲ್ಲ;
ರೋಷ ದ್ವೇಶಗಳಿಲ್ಲ, ಮತ್ಸರದ ಲವಲೇಶವಿಲ್ಲ,
ಅರುಣೋದಯದ ಇಬ್ಬನಿಯ ಪರಿಶುಧ್ಧತೆ ಅವಳು.
ಸದಾ ಸೌಮ್ಯ ಮುಖ, ಶುಭ್ರ ಮಂದಹಾಸದ ಸೆಳೆ,
ಕೃತ್ರಿಮತೆಯ ಮುಸುಕು ಅಲ್ಲಿ ಸುಳಿಯುವಂತಿಲ್ಲ;
ಶ್ರೀ ದೇವರನು ಈ ಲೋಕದಲಿ ನೋಡುವುದಿದ್ದಲ್ಲಿ
ಅವಳ ದರ್ಶನ ಸಾಕು, ದಿವ್ಯ ಶ್ರೀ ದೇವಿಯೇ ಅವಳು.

ಪರಿಶುಧ್ಧ ಚಿನ್ನ ಅವಳು, ಆ ಘನತೆ, ಶುಭ್ರತೆ, ಬಣ್ಣ,
ಹೃದಯದಾಳದಿ ಘನ ಗೌರವ ಉಕ್ಕೇರಿಸುವ ತೇಜಸ್ಸು;
ಪ್ರೇಮ ಸ್ವಾಮ್ಯದ ತೀವ್ರತೆಯಲ್ಲೂ ಭವ್ಯ ದಿವ್ಯತೆ ತರುವ
ಅವಳು ಬರೆ ಹೆಣ್ಣಲ್ಲ, ಕೌತುಕಗಳ ಕಣಜ, ರಾಶಿ,

Wednesday, April 27, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success