ಬಾಳ ನಾವೆ Poem by Praveen Kumar in Divya Belaku

ಬಾಳ ನಾವೆ

ನೀಲ ಮೇಲೆ, ನೀಲ ಕೆಳಗೆ, ನೀಲ ಸುತ್ತುಮುತ್ತಲು,
ನೀಲ ಬಿಟ್ಟು ಏನೂ ಇಲ್ಲ, ನೀಲ ಒಂದೆ ಅಲ್ಲಿ ಎಲ್ಲ,
ಬಾಳ ನಾವೆ ನೀಲ ಕಡಲ ಸೀಳಿ ಮುಂದೆ ಹೋಗುವಾಗ,
ನೀಲದಲ್ಲಿ ಕೂಡಿ ಬೆರೆತು ತನ್ನ ಗುರುತು ಮರೆಯುವಾಗ,
ದೂರ ಕ್ಷಿತಿಜವನ್ನು ಒಡೆದು, ಶುಭ್ರ ಬೆಳಕಿನೋಘವಾಗಿ,
ಹೊನ್ನ ಕಲಶ ಕೈಲಿ ಹಿಡಿದು, ಪೂರ್ಣಕುಂಭವನ್ನು ಹೊತ್ತು,
ನನ್ನ ಬಾಳ ನಾವೆಯತ್ತ ನೀನು ನಗುವ ಚೆಲ್ಲಿ ಬಂದೆ,
ನನ್ನ ನಾವೆಯನ್ನು ಹೊಕ್ಕು ತಗ್ಗಿ ಬಗ್ಗಿ ಮಂಡಿಯೂರಿ,
ಹೊನ್ನ ಕಲಶ ಮುಂದೆುಟ್ಟು, ನಿನ್ನ ನನಗೆ ಕೊಟ್ಟುಬಿಟ್ಟೆ.

ಯಾರು, ಯಾಕೆ, ಏನುಯೆಂದು ಒಂದೂ ನಾನು ತಿಳಿಯದಾಗಿ,
ನಿನ್ನನ್ನೆತ್ತಿ, ಪ್ರೀತಿುಂದ ಕಣ್ಣು ಕಣ್ಣು ಮಿಲಿಸಿಬಿಟ್ಟೆ;
ನಿನ್ನ ಕಣ್ಣ ಮಿಂಚಿನಲ್ಲಿ ನನ್ನ ಕಣ್ಣ ಮಿಂಚು ಬೆರೆತು,
ಸೂರ್ಯ ನಾಚುವಂತ ಹೊಳಪು ನಿನ್ನ ನನ್ನ ಸುತ್ತಿದಾಗ,
ನಾನು ನಿನ್ನ ತಬ್ಬಿ ಹಿಡಿದು, ನನ್ನ ಪ್ರೀತಿ ತುಂಬ ಸುರಿದು,
ನನ್ನ ದೇವಿ ನೀನುಯೆಂದು ನನ್ನ ನಿನಗೆ ಕೊಟ್ಟುಬಿಟ್ಟು,
ಮುಖವನೆತ್ತಿ ನಿನ್ನ ಕಣ್ಣ ಕಣ್ಣುತುಂಬಿ ನೋಡಿದಾಗ,
ಕಣ್ಣು ತುಂಬ ಅಶ್ರು ಕಂಡೆ, ಮುಖದ ತುಂಬ ವ್ಯಥೆಯ ಕಂಡೆ;
ನೀನು ನನ್ನ ಕಾಲುಮುಟ್ಟಿ, ಹಿಂದೆ ತಿರುಗಿ ಓಡಿಹೋದೆ.

ದೂರ ಕ್ಷಿತಿಜದಲ್ಲಿ ನೀನು ಪುನಃ ಹೊಕ್ಕು ಮಾಯವಾದೆ,
ನಿನ್ನ ಪ್ರೀತಿ ಹೊತ್ತುತಂದ ಹೊನ್ನ ಕಲಶ, ಪೂರ್ಣಕುಂಭ
ನನ್ನ ಆತ್ಮ ಹೃದಯದಲ್ಲಿ ನಿನ್ನ ಪ್ರೀತಿ ಬೆಸುಗೆಯಾಗಿ
ನಿನ್ನ ನನ್ನ ಬಂಧವಾಗಿ ಬಾಳು ತುಂಬ ತುಡಿಯುತ್ತಿದೆ;
ದೂರ ಕ್ಷಿತಿಜದಲ್ಲಿ ಈಗ ನೀನು ಬಂದ ಕುರುಹೆಯಿಲ್ಲ,
ನೀಲ ಮೇಲೆ, ನೀಲ ಕೆಳಗೆ, ನೀಲ ಸುತ್ತಮುತ್ತಲು,
ನೀಲ ಬಿಟ್ಟು ಏನೂ ಇಲ್ಲ, ನೀಲ ಒಂದೆ ಅಲ್ಲಿ ಎಲ್ಲ,
ಬಾಳ ನಾವೆ ನೀಲ ಕಡಲ ಸೀಳಿ ಮುಂದೆ ಹೋಗುವಾಗ,
ನೀಲದಲ್ಲಿ ಕೂಡಿ ಬೆರೆತು ನನ್ನ ಗುರುತು ಮರೆಯುವೆ.

Wednesday, April 27, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success