ಬರಲಿಲ್ಲ ಯಾಕೆ? Poem by Praveen Kumar in Divya Belaku

ಬರಲಿಲ್ಲ ಯಾಕೆ?

ಬರುತ್ತೇನೆಂದವಳು ನೀನು ಬರಲಿಲ್ಲ ಯಾಕೆ?
ಪುಕ್ಕಗಳ ಬಿಚ್ಚಿ, ಮೇಲೇರಲು ಪುಕ್ಕ ಬಡಿದಿದ್ದ ನೀನು
ಬರುತ್ತೇನೆಂದವಳು ನೀನು ಬರಲಿಲ್ಲ ಯಾಕೆ?
ಗಾಳಿ ಜೋರಾಯಿತೆ, ಕಾರ್ಮೋಡ ಮುಸುಕಿತೆ,
ಆಕಾಶದ ತುಂಬ ಕಾರ್ಗತ್ತಲು ಕಮಿತೆ,
ಕತ್ತಲಲ್ಲಿ ನಿನಗೆ ದಾರಿಯು ತಪ್ಪಿತೆ ಅಥವ
ಬೆಳಕು ಬರಲೆಂದು ಕಾಯುತ್ತ ಕುಳಿತಿಯೆ,
ಬರುತ್ತೇನೆಂದವಳು ನೀನು ಬರಲಿಲ್ಲ ಯಾಕೆ?

ಆಕಾಶ ನೋಡುತ್ತ ನಾನು ವರ್ಷಗಳ ಕಳೆದೆ,
ಗಾಳಿಯ ರಭಸವು ದಿನ ದಿನ ಬದಲಾದರೂ,
ಕಾರ್ಮೋಡ ಸೂರ್ಯನಾಟ ಸತತ ನಡೆದರೂ,
ಕತ್ತಲು ಬೆಳಕಾಗಿ ಮತ್ತೆ ಬೆಳಕು ಕತ್ತಲಾದರೂ
ಬರುತ್ತೇನೆಂದವಳು ನೀನು ಬರಲೇ ಇಲ್ಲ;
ಕಿವಿ ಬಿಚ್ಚಿ ನಾನು ನಿನ್ನ ಚಿಲಿಪಿಲಿಗೆ ಕಾದೆ,
ರೆಕ್ಕೆಯ ಪಟ ಪಟ ಶಬ್ದ ಬಡಿತಕ್ಕೆ ಕಾದೆ,
ಆದರೂ ನಿನ್ನ ವಾರ್ತೆ ದಕ್ಕಲಿಲ್ಲ ಯಾಕೆ?

ದಿನರಾತ್ರಿ ದಿಗಂತದತ್ತ ಕಣ್ಣಿಟ್ಟು ಕಾಯುವೆನು,
ಬರುತ್ತೇನೆಂದವಳು ನೀನು ಬಂದೇ ತೀರುವಿಯೆಂದು,
ನಮ್ಮೀ ದೂರವನು ಜಿಗಿದು ಹಾರಿ ಬರುವಿಯೆಂದು;
ತಳಿರು ತೋರಣ ಕಟ್ಟಿ, ವಾದ್ಯಘೋಷದ ಸಹಿತ
ನಿನ್ನ ಸ್ವಾಗತಕೆ ನಾನು ಕಾದದ್ದೆ ಬಂತು;
ತಳಿರು ತೋರಣ ಒಣಗಿ ಮುರಿದು ಬಿತ್ತು ಎಂದೋ,
ವಾದ್ಯಘೋಷವು ನಿಂತು ಕರಾಳ ಮೌನವು ಇಂದು,
ಆದರೆ ನೀನು ಬರುವ ವಿಶ್ವಾಸ ಸಡಿಲಾಗಿಲ್ಲ ಇನ್ನೂ.

ಯಾವ ಗಿಡುಗನ ಧಾಳಿ ನಿನ್ನ ತಡೆುತೋ ಏನೋ,
ಯಾವ ಗುಡುಗು ಮಿಂಚು ನಿನ್ನ ಬಡೆುತೋ ಏನೋ,
ಯಾವ ಮಳೆಯ ರಭಸ ನಿನ್ನ ಪುಕ್ಕವ ಹರಿದು
ಯಾವ ದಾರಿಲಿ ಬಿದ್ದು, ಯಾವ ತೊಂದರೆಯಲ್ಲಿ
ಬಿದ್ದಿರುವೆ ನೀನೆಂದು ನಾನು ತಿಳಿಯುವ ಹಾಗಿಲ್ಲ,
ನಿನ್ನ ನೆರವಿಗೆ ನಾನು ಬರುವ ಹಾಗೆಯೇ ಇಲ್ಲ;
ನಿನ್ನ ಸ್ಥಿತಿಗತಿ ಊಹಿಸಿ ನಿಶ್ಶಕ್ತಗೊಂಡಿದೆ ಹೃದಯ,
ಭಯ ನೋವಿನ ಒದೆತ ಕೊಲ್ಲುತ್ತಿದೆ ನನ್ನ.
ಕಾಲದಾಘಾತ ಯಾರನ್ನೂ ಬಿಡುವುದೇ ಇಲ್ಲ,
ಕಾಯುವುದರಲ್ಲೇ ನಾನು ಮುದಿಯಾದೆನಲ್ಲ;
ಹಲ್ಲುಗಳುದುರಿವೆ, ಕಣ್ಣು ಮಂಜಾಗಿದೆ ಈಗ,
ಮೈಮನಗಳ ಅಳವು ಹುರುಪು ಕುಗ್ಗುತ್ತಿದೆ ಈಗ;
ಆದರೂ ನಿನ್ನ ಮರೆಯದೆ ನಾನು ಕಾದು ಕಾದು
ನನ್ನಿರವಿಗೆ ಒಂದರ್ಥ ಗುರಿ ಕೊಡುತಲಿರುವೆ;
ನೀನು ನನ್ನ ಗುರಿ, ಅರ್ಥ, ನನ್ನಸ್ಥಿತ್ವ, ನನ್ನ ಸುಖ,
ನೀನು ಬರುವಿಯೆಂದು ಇನ್ನೂ ಕಾಯುತ್ತಲಿರುವೆ.

ಬರುತ್ತೇನೆಂದವಳು ನೀನು ಬಂದೇ ಬರುವಿ,
ನನ್ನೀ ಧೀರ್ಘ ತಪಸ್ಸಿಗೆ ಫಲ ತಂದೇತರುವಿ;
ಇನ್ನೆಷ್ಟು ದೂರವೀ ಸಂಯೋಗ ಸಮ್ಮಿಲನ,
ಇನ್ನೆಷ್ಟು ಸಮಯವೀ ವಿಯೋಗದ ಬೇನೆ?
ಪ್ರಕೃತಿಯ ಚಕ್ರ ಒಂದು ಸುತ್ತು ಸುತ್ತುವವರೆಗೆ
ಕಾಯಲೇ ಬೇಕು, ಇದು ಪ್ರಕೃತಿಯ ನಿಯಮ;
ಕಾಲ ಕೂಡಲು ನಾವು ಕೂಡುವುದು ಸತ್ಯ,
ಮತ್ತೆ ಬೇರ್ಪಡದಂತೆ ಬೆಸೆಯುವುದೂ ಸತ್ಯ.

Wednesday, April 27, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success