ಈ ಪ್ರೀತಿ Poem by Praveen Kumar in Divya Belaku

ಈ ಪ್ರೀತಿ

ಇದು ಅಸ್ಖಲಿತ ಶುಧ್ಧ ಸ್ಪಟಿಕದಂತಹ ಪ್ರೀತಿ,
ಮುಂಜಾವದ ಇಬ್ಬನಿಯಂತೆ ನಿಷ್ಕಲ್ಮಶ ಶುಧ್ಧ;
ಮೈಮನ ಪ್ರಜ್ಞೆಯ ತಿರುಚಿನ ಸುಳಿವೆ ಕಾಣದ
ಆತ್ಮಜನ್ಯ ಗಂಗಾ ಪ್ರವಾಹ, ದಿವ್ಯ ಹೊಂಬೆಳಕು.

ಶೃಧ್ಧೆ ನಿಷ್ಠೆಯ ಬೆಡಗೂ ಮುಟ್ಟದ ಶುಧ್ಧ ತೇಜಸ್ಸು,
ತನ್ನನ್ನೆ ಉರಿದು ಬೆಳಕು ಕೊಡುವ ದಟ್ಟ ಓಜಸ್ಸು;
ಗುರಿ ತೊರೆದಾಗ ಮತ್ತೆ ಮೇಲೇರಲಾಗದ ವೈರಾಗ್ಯ,
ಇದುವೆ ಅಸ್ಖಲಿತ ಪರಿಶುಧ್ಧ ಸ್ಪಟಿಕದಂತಹ ಪ್ರೀತಿ.

ಮೈಮನ ಹೃದಯಾತ್ಮಗಳಲ್ಲಿ ಅವಿಚ್ಛಿನ್ನ ಏಕತಾನ,
ಅರ್ಪಣೆ ಚಿತ್ತದತ್ತ ನಡೆವುದೆ ಅದರ ಬಾಳ ಧರ್ಮ;
ಸ್ವಚ್ಛಂದ ಪ್ರಜ್ಞೆಯು ಇಲ್ಲಿ ಪ್ರೀತಿಯಜ್ಞಕ್ಕೆ ಸಮಿತ್ತು,
ಪ್ರೀತಿ ತ್ಯಾಗದ ದಿಶೆಗೆ ದಾರಿ ತೋರುವ ಕೈಕಂಬ.

ಈ ಉತ್ಕಟ ಪ್ರೀತಿ ಉರಿವ ಬೆಂಕಿಗಿಂತಲೂ ತೀವ್ರ,
ಇಳಿದಷ್ಟು ಕೆಳಕ್ಕಿಳಿವ ಸಪ್ತ ಸಾಗರಕ್ಕಿಂತಲೂ ಆಳ,
ಕಂಡ ಕಂಡ ಕಡೆ ಕಾಣಿಸುವ ಆಕಾಶಕ್ಕಿಂತ ಅಗಲ,
ಹಿಮಾಲಯ ತಪ್ಪಲಿನ ದೈತ್ಯ ಕಾಡಿಗಿಂತಲೂ ದಟ್ಟ.

ಇದು ಅಸ್ಖಲಿತ ಶುಧ್ಧ ಸ್ಪಟಿಕದಂತಹ ಪ್ರೀತಿ,
ಮುಂಜಾವದ ಇಬ್ಬನಿಯಂತೆ ನಿಷ್ಕಲ್ಮಶ ಶುಧ್ಧ;
ಮೈಮನ ಪ್ರಜ್ಞೆಯ ತಿರುಚಿನ ಸುಳಿವೆ ಕಾಣದ
ಆತ್ಮಜನ್ಯ ಗಂಗಾ ಪ್ರವಾಹ, ದಿವ್ಯ ಹೊಂಬೆಳಕು.

ಮೈ ಮೈಲಿಗೆಗೊಂಡು, ಶುಭ್ರ ಬೆಳಕು ಮಂಜಾದಾಗ,
ಮತ್ತೆ ಉರಿಯುವ ಬಯಕೆ ಈ ನಂದಾದೀಪಕ್ಕಿಲ್ಲ;
ಹೊಗೆಯನುಗುಳುವ ತನ್ನ ಮಸುಕು ಬೆಳಕಿಗಿಂತ
ಭೂಗರ್ಭದಲ್ಲಡಗುವುದೆ ಈ ದಿವ್ಯ ಪ್ರೀತಿಗೆ ಪ್ರಿಯ.

Wednesday, April 27, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success