ಹೊಸ ಬೆಳಕು Poem by Praveen Kumar in Divya Belaku

ಹೊಸ ಬೆಳಕು

ನನ್ನವಳು ನನ್ನ ಬಳಿ ಬರುವಳೆಂಬ ಆಶೆ ಇನ್ನೂ ಇದೆ,
ಆಶೆಯೆ ತಾನೆ ಜೀವ ದೀಪವ ಬೆಳಗಿಸುವ ತೈಲ;
ನನ್ನವಳು ಬಂದು ಕವಿದ ಕತ್ತಲನು ಬಗೆದು ಸಿಗಿದು
ಅರುಣೋದಯವ ತರುವಳೆನ್ನುವ ಆಶೆ ಇನ್ನೂ ಇದೆ,
ಹೊಸ ಬೆಳಕು, ದಿನ ತಾನೆ ಬದುಕಿನ ಹುಟ್ಟುಗೋಲು,
ಬಾಳ ನಾವೆಯ ಮುನ್ನಡೆಸುವ ದಿವ್ಯ ಸುಪ್ತ ಚೈತನ್ಯ.

ಬಂದವಳು ನನ್ನ ತನ್ನ ತೋಳತೆಕ್ಕೆಯಲಿ ಬಿಗಿ ಹಿಡಿದು,
ಇನ್ನೆಂದೂ ದೂರವಾಗೆನುಯೆಂದು ಕೂಗಿ ಹೇಳಬೇಕು;
ನಾನಾದರೋ ಬಿಗಿಹಿಡಿದವಳ ಮುಖತುಂಬ ಚುಂಬಿಸುತ
ಇನ್ನೆಂದೂ ತೋಳಸೆರೆ ಸಡಿಲಿಸೆನೆಂದು ಶಪಥವಿಕ್ಕಬೇಕು;
ನಮ್ಮ ತೋಳಸೆರೆಗಳ ಹಿತ ಬಿಗಿತ ಸಾಂದ್ರೀಕರಿಸಿದ ಹಾಗೆ
ನಾವು ಮೈಮರೆತು ಸುಖ ತೃಪ್ತಿಯಲಿ ಐಕ್ಯಗೊಳ್ಳಬೇಕು.

ಅವಳೋ ದಪ್ಪ ಪದರುಗಳ ದಟ್ಟ ಕಾಲಗರ್ಭದಲಿ ನೆಗೆದು
ಆಳ ಬಹು ಆಳದಲಿ ಸಿಕ್ಕುಸಿರುಗಟ್ಟಿ ನೆರೆ ಒದ್ದಾಡುತ್ತಿಹಳು;
ಕತ್ತಲೆಯ ಗಂಹ್ವರದಿಂದ ಹೊರ ಬರುವ ದಾರಿಯ ಕಾಣದೆ
ದಟ್ಟ ಹತಾಶೆಯ ಬಿಲದಲ್ಲಿ ವಿಲವಿಲನೆ ಒದ್ದಾಡುತ್ತಿಹಳು;
ಕೈಲಾಗದವನಾಗಿ ನಾನು ಕೈ ಕೈ ಹಿಚುಕುವುದನು ಬಿಟ್ಟು,
ಹೊಸ ದಾರಿ, ಹೊಸ ಬೆಳಕ ನನ್ನವಳಿಗೆ ಕೊಡದಾದೆನಲ್ಲ.

ನನ್ನವಳು ನಡೆದ ಆ ಕಠಿಣ ದಾರಿ ಬರೆ ಅಂತಿಂತಹದ್ದÀಲ್ಲ;
ಎಡ ಬಲ, ಹಿಂದೆ ಮುಂದೆ, ಎದುರು, ಮೇಲೆ ಕೆಳಗೆ, ನಡುವೆ,
ಎದ್ದು ಬಿದ್ದು, ಸಿಡಿದು, ಎದೆಯೆತ್ತಿ ನಿಂತು, ಅಸ್ತ್ರಶಸ್ತ್ರಗಳ ಧರಿಸಿ,
ಅಡೆತಡೆಗಳ ಹೊಡೆದು, ಕಡಿದು, ಕೆಡೆದು ನಡೆದವಳು ಅವಳು;
ತಗ್ಗಿ ಬಗ್ಗಿ ಸದಾ ನಡೆಯುವ ನನ್ನ ಚೆನ್ನೆ, ಯುಧ್ಧ ಸಿಧ್ಧತೆಯಲ್ಲಿ,
ಸಮೀಹಿತ ಗುರಿಯ ಮುಟ್ಟಲು ಮುನ್ನುಗ್ಗಿದ್ದಳು ಅಂದು.

ಪ್ರತಿರೋಧಗಳಭೇದ್ಯ ದಂಡು ಮುನ್ನಡೆಯ ತಡೆದಾಗ,
ಹಿಡಿದ ಗುರಿ ದಾರಿ ತನ್ನೆದುರಲ್ಲೆ ನಲುಗಿ ಬಿರುಕಾದಾಗ,
ಬಗ್ಗದೆ, ಜಗ್ಗದೆ, ಕುಗ್ಗದೆ ನನ್ನವಳು ಪ್ರತಿರೋಧಕ್ಕೆದೆಕೊಟ್ಟು
ಬಾಯಿಬಿಟ್ಟ ಭೀಕರ ಬಿರುಕಲ್ಲಿ ಕಣ್ಣು ಮುಚ್ಚಿ ಹಾರಿದಳು;
ಕತ್ತಲೆಯ ರೌರವ ಕೂಪದಲಿ ಆಳ, ಆಳ, ಬಹು ಆಳಕ್ಕಿಳಿದು,
ದಟ್ಟ ಹತಾಶೆಯ ಬಿಲದಲ್ಲೀಗ ವಿಲವಿಲನೆ ಒದ್ದಾಡುತ್ತಿಹಳು.
ಹಿಡಿದ ಆ ಗುರಿ ದಾರಿ ಇನ್ನೂ ನನ್ನವಳ ಕಾಯುತ್ತಿದೆ;
ನನ್ನವಳು ಬಂದು ಕವಿದ ಕತ್ತಲನು ಬಗೆದು ಸಿಗಿದು
ಅರುಣೋದಯವ ತರುವಳೆನ್ನುವ ಆಶೆ ಇನ್ನೂ ಇದೆ;
ಆಳ, ಬಹು ಆಳದಲಿ ಸಿಕ್ಕುಸಿರುಗಟ್ಟಿ ಒದ್ದಾಡುತ್ತಿರುವಾಗ,
ಕೈಲಾಗದವನಾಗಿ ನಾನು ಕೈ ಕೈ ಹಿಚುಕುವುದನು ಬಿಟ್ಟು
ಹೊಸ ದಾರಿ, ಹೊಸ ಬೆಳಕ ನನ್ನವಳಿಗೆ ಕೊಡದಾದೆನಲ್ಲ.

Wednesday, April 27, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success